ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ | ಮತ್ತೆ ಹಾಲು ಖರೀದಿ ದರ ಹೆಚ್ಚಿಸಿದ ಶಿಮುಲ್, ನಾಳೆಯಿಂದ ಅನ್ವಯ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಾಲು ಉತ್ಪಾದಕರಿಗೆ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್) ಗುಡ್ ನ್ಯೂಸ್ ನೀಡಿದೆ. ಮಾರ್ಚ್ 1ರಿಂದ 31ರ ವರೆಗೆ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 2.25 ರೂಪಾಯಿ ಹೆಚ್ಚಿಸಲು ಮುಂದಾಗಿದೆ. ಮಾರ್ಚ್ 31ರ ಸಂದರ್ಭದಲ್ಲಿ ಮಾರುಕಟ್ಟೆ ಸ್ಥಿತಿಗತಿ, ಬೇಡಿಕೆ, ಉತ್ಪಾದನೆ ಇತ್ಯಾದಿ ವಿಚಾರಗಳನ್ನು ಒಳಗೊಂಡು ಪರಿಷ್ಕೃತ ದರ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.

ಶಿಮುಲ್ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 90 ಸಾವಿರಕ್ಕೂ ಅಧಿಕ ಉತ್ಪಾದಕರು ಶಿಮುಲ್ ಗೆ ಹಾಲು ಪೂರೈಸುತ್ತಿದ್ದಾರೆ. ದರ ಹೆಚ್ಚಳದಿಂದ ಅವರಿಗೆ ಅನುಕೂಲವಾಗಲಿದೆ. ಆದರೆ, ಗ್ರಾಹಕರಿಗೆ ಇದರಿಂದ ಯಾವುದೇ ಭಾರ ಆಗುವುದಿಲ್ಲ.
ಡಿ.ಆನಂದ್, ಶಿಮುಲ್ ಅಧ್ಯಕ್ಷ

ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಪರಿಷ್ಕøತ ದರದಿಂದ ಹಾಲು ಉತ್ಪಾದಕರಿಗೆ 27.50 ರೂಪಾಯಿ ಸೇರಿದಂತೆ ಸರ್ಕಾರದ ಪ್ರೋತ್ಸಾಹ ಧನ ಐದು ರೂಪಾಯಿ ಸೇರಿ ಒಟ್ಟು 32.50 ರೂ. ಸಿಗಲಿದೆ.

ಈ ವರ್ಷದಲ್ಲಿ 2ನೇ ಸಲ ದರ ಏರಿಕೆ | ಕೋವಿಡ್ ಹಿನ್ನೆಲೆ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಶಿಮುಲ್ ನೀಡಿರುವ ಪರಿಷ್ಕøತ ದರ ವರದಾನವಾಗಿ ಪರಿಣಮಿಸಲಿದೆ. ಜನವರಿ 13ರಂದು ಪ್ರತಿ ಲೀಟರ್ ಹಾಲಿಗೆ 2.75 ರೂಪಾಯಿ ಹೆಚ್ಚಿಸಲಾಗಿತ್ತು.

ಕೋವಿಡ್ ಕರಾಳ ದಿನದಲ್ಲಿ ಕಡಿತ | ಕಳೆದ ವರ್ಷ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 7.70 ರೂಪಾಯಿ ಹೆಚ್ಚಿಸಲಾಗಿತ್ತು. ಆದರೆ, ಕೋವಿಡ್ ನಿಂದಾಗಿ ಬೇಡಿಕೆ ಕುಸಿದಿದ್ದರಿಂದ 7 ರೂ. ಕಡಿತಗೊಳಿಸಲಾಗಿತ್ತು. ಈಗ ಗ್ರಾಹಕರಿಂದ ಹಾಲಿನ ಬೇಡಿಕೆ ಉತ್ತಮವಾಗಿದೆ. ಮಾರುಕಟ್ಟೆ ಚೇತರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ 2.25 ರೂಪಾಯಿ ಹೆಚ್ಚಿಸಲಾಗುತ್ತಿದೆ.

error: Content is protected !!