ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಲವು ಖ್ಯಾತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಆನ್ ಲೈನ್ ಕೋರ್ಸ್ ಆರಂಭಕ್ಕೆ ಅನುಮತಿ ನೀಡಿದೆ. ಇದು ಮಲೆನಾಡಿನ ಯುವಪೀಳಿಗೆ ಪಾಲಿಗೆ ವರದಾನವಾಗಿ ಮಾರ್ಪಡಲಿದೆ.
ಕೋವಿಡ್-19 ಮಹಾಮಾರಿ ಉನ್ನತ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಎಷ್ಟು ನಿಜವೋ, ಹೊಸ ಸಾಧ್ಯತೆಗಳ ಕಡೆಗೆ ಚಿಂತಿಸುವಂತೆ ಮಾಡಿರುವುದು ಅಷ್ಟೇ ನಿಜ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯೇ ಅಂತರ್ಜಾಲ ತಂತ್ರಜ್ಞಾನದ ಕಡೆಗೆ ವಾಲಿರುವುದು ಸದ್ಯದ ಮಟ್ಟಿಗೆ ಒಪ್ಪಿಕೊಳ್ಳಲೇಬೇಕು. ಈ ಹಿನ್ನೆಲೆಯಲ್ಲಿ ಮಲೆನಾಡಿನ ಶಿಕ್ಷಣಾರ್ಥಿಗಳ ಮನೆಬಾಗಿಲಿಗೆ ಉನ್ನತ ಶಿಕ್ಷಣವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಆನ್ ಲೈನ್ ಕೋರ್ಸ್ ಗಳನ್ನು ಪ್ರಾರಂಭಿಸಲು ಅವಕಾಶ ದೊರಕಿರುವ ದೇಶದ ಕೆಲವೇ ವಿ.ವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೂಡ ಒಂದು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ
– ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಪತಿ, ಕುವೆಂಪು ವಿವಿ
2020-21ನೇ ಶೈಕ್ಷಣಿಕ ಸಾಲಿನಿಂದ ಪೂರ್ವಾನುಮತಿ ಇಲ್ಲದೆಯೇ ಪೂರ್ಣ ಪ್ರಮಾಣದಲ್ಲಿ ಆನ್ ಲೈನ್ ಕೋರ್ಸ್ಗಳನ್ನು ಆರಂಭಿಸಲು ಅನುಮತಿ ದೊರಕಿದೆ. ಈ ಭಾಗದ ಉನ್ನತ ಶಿಕ್ಷಣಾರ್ಥಿಗಳಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಯುಜಿಸಿ, ದೇಶದಾದ್ಯಂತ 38 ವಿಶ್ವವಿದ್ಯಾಲಯಗಳಿಗೆ ಆನ್ ಲೈನ್ ಮಾದರಿಯಲ್ಲಿ ಕೋರ್ಸ್ಗಳನ್ನು ಪ್ರಾರಂಭಿಸಲು ಅವಕಾಶ ನೀಡಿದೆ. ದೇಶದ 38 ವಿಶ್ವವಿದ್ಯಾಲಯಗಳು ಇನ್ನು ಮುಂದೆ ಆನ್ ಲೈನ್ ಮೂಲಕ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಬಹುದಾಗಿದೆ. ಅದರಲ್ಲಿ ಕುವೆಂಪು ವಿವಿ ಕೂಡ ಸೇರಿರುವುದು ಮಲೆನಾಡಿನ ಹೆಮ್ಮೆಯಾಗಿದೆ.
https://www.suddikanaja.com/2021/02/03/government-employee-association-sports-meet-in-shivamogga/
ಯಾವ ವಿವಿಗಳಿಗೆ ಏನು ಸೌಲಭ್ಯ | ಕರ್ನಾಟಕದಲ್ಲಿ ಕುವೆಂಪು ವಿವಿಯೊಂದಿಗೆ ಜೈನ್, ಯೆನೆಪೊಯ ಮತ್ತು ಮೈಸೂರು ವಿ.ವಿಗಳಿಗೆ ಅನುಮತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯಕ್ಕೆ ವಾಣಿಜ್ಯ ಕೋರ್ಸ್ಗಳನ್ನು ಮಾತ್ರ ನಡೆಸಲು ಅನುಮತಿ ದೊರಕಿದ್ದು, ಯೆನೆಪೊಯಾ ವಿ.ವಿ.ಯು ಬಿ.ಕಾಂ ಪದವಿ ಮಾತ್ರ ಪ್ರಾರಂಭಿಸಬಹುದು. ಆದರೆ, ಕುವೆಂಪು ವಿ.ವಿಯು ಬಿಬಿಎಂ, ಬಿ.ಕಾಂ ಮತ್ತು ಬಿ.ಎ ಸ್ನಾತಕ ಕೋರ್ಸ್ ಜೊತೆಗೆ ಎಂಬಿಎ, ಎಂಕಾಂ, ಮತ್ತು ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್ ಮತ್ತು ಕನ್ನಡ ವಿಷಯಗಳಲ್ಲಿ ಎಂಎ ಸ್ನಾತಕೋತ್ತರ ಪದವಿ ಕೋರ್ಸ್ಗಳ ಆರಂಭಕ್ಕೆ ಅನುಮತಿ ಪಡೆದಿದೆ. 2020-21ನೇ ಸಾಲಿನಿಂದ ಈ ಎಲ್ಲ ಕೋರ್ಸುಗಳನ್ನು ಪ್ರಾರಂಭಿಸಲು ಪ್ರತ್ಯೇಕ ಅನುಮತಿ ಪಡೆಯಬೇಕಿಲ್ಲ ಎಂದು ಯುಜಿಸಿ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕುವೆಂಪು ವಿವಿಗೆ ಹಲವು ಗರಿಮೆ | ಕುವೆಂಪು ವಿ.ವಿ ನ್ಯಾಕ್ ನಿಂದ ‘ಎ’ ಶ್ರೇಣಿ ಪಡೆದಿದ್ದು, ಕೇಂದ್ರ ಸರ್ಕಾರದ ಎನ್.ಐ.ಆರ್.ಎಫ್.ನಲ್ಲಿ 73ನೇ ರ್ಯಾಂಕ್ ಪಡೆದಿದೆ. ಇನ್ನು ಇತ್ತೀಚಿಗೆ ತಾನೆ ಬಿಡುಗಡೆಯಾದ ಸೈಮಾಗೋ ರ್ಯಾಂಕಿಂಗ್ನಲ್ಲಿ 56ನೇ ಸ್ಥಾನ ಪಡೆದು ದೇಶದ ಮಂಚೂಣಿಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈಗಾಗಲೇ ವಿಶ್ವವಿದ್ಯಾಲಯವು ಆನ್ ಲೈನ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ವಿಶ್ವವಿದ್ಯಾಲಯದ ವೆಬ್ ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
https://www.suddikanaja.com/2020/11/27/kuvempu-university/