ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಂಕದ ಬಗ್ಗೆ ಸಂಶೋಧನೆಯೊಂದು ಬೆಳಕು ಚೆಲ್ಲಿದೆ. ಈ ಮೂಲಕ ಇದುವರೆಗೆ ಇದ್ದ ಹಲವು ಗೊಂದಲಗಳಿಗೆ ಇದು ಇತಿಶ್ರೀ ಹಾಡುವ ಸಾಧ್ಯತೆ ಇದೆ.
ಸಂಶೋಧನೆಯ ಕುರಿತು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಇತಿಹಾಸಕಾರ ಖಂಡೋಜಿರಾವ್, ಸಂಶೋಧಕ ನಿಧಿನ್ ಓಲಿಕೆರೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಇಡೀ ವಿಶ್ವವೇ ಟಿಪ್ಪು ಹುಟ್ಟಿದ್ದು 1750 ನವೆಂಬರ್ 20ರಂದು ಒಪ್ಪಿಕೊಂಡಿದೆ. ಇದು ಇತಿಹಾಸದ ಪುಸ್ತಕಗಳಲ್ಲೂ ಓದಲು ಸಿಗುತ್ತದೆ. ಆದರೆ, ನಿಧಿನ್ ಅವರು ಸಂಶೋಧನೆಯ ಮೂಲಕ ಟಿಪ್ಪು ನೈಜ ಜನ್ಮ ದಿನಾಂಕವನ್ನು ಕಂಡುಕೊಂಡಿದ್ದಾರೆ. ಸಂಶೋಧನೆಯ ಪ್ರಕಾರ, 1751 ಡಿಸೆಂಬರ್ 1 ಟಿಪ್ಪು ಜನ್ಮ ದಿನಾಂಕವಾಗಿದೆ. ಅದಕ್ಕೆ ಸಾಕಷ್ಟು ಪುರಾವೆಗಳನ್ನೂ ಅವರು ನೀಡಿದ್ದಾರೆ.
ಬ್ರಿಟಿಷ್ ಲೈಬ್ರರಿ ತೆರೆದಿಟ್ಟ ಸತ್ಯ | ಹೊಸನಗರ ತಾಲೂಕಿನ ನಗರದಲ್ಲಿ ಸಿಕ್ಕ ರಾಕೆಟ್ ಬಗ್ಗೆ ಕೈಗೊಂಡ ಸಂಶೋಧನೆಯನ್ನು ಮಂಡಿಸಲು ಏಪ್ರಿಲ್ 2019ರಲ್ಲಿ ಸ್ವತಂತ್ರ ಇತಿಹಾಸ ಸಂಶೋಧಕ ನಿಧಿನ್ ಓಲಿಕೆರ ಅವರು ಲಂಡನ್ ಗೆ ತೆರಳಿದ್ದರು. ಅಲ್ಲಿಯ ಬ್ರಿಟಿಷ್ ಗ್ರಂಥಾಲಯದಲ್ಲಿ ಅವರಿಗೆ ಒಂದು ಅಮೂಲ್ಯ ಹಸ್ತ ಪ್ರತಿಯೊಂದು ಕಣ್ಣಿಗೆ ಬಿದ್ದಿತ್ತು.
ಪರ್ಷಿಯನ್ ಭಾಷೆಯಲ್ಲಿ ಇರುವ ಅದರ ಹೆಸರು `ಫತೇ ಉಲ್ ಮುಜಾಹಿದ್ದೀನ್’, ಇದು ಟಿಪ್ಪು ತಾನೆ ಬರೆಸಿದ ಮಿಲಿಟರಿ ಕೈಪಿಡಿಯಾಗಿದೆ. ಇದರಲ್ಲಿ ಟಿಪ್ಪುವಿನ ಹಸ್ತಾಕ್ಷರ ಮತ್ತು ಮುದ್ರೆಯನ್ನೂ ಕಾಣಬಹುದಾಗಿದೆ.
ತನ್ನ ಸೈನ್ಯದಲ್ಲಿ ಇದ್ದ ಎಲ್ಲ ಸೇನಾಧಿಕಾರಿಗಳಿಗೆ ಕಡ್ಡಾಯವಾಗಿ ಓದಲು ತಯಾರಿಸಿದ ಕೈಪಿಡಿ ಇದಾಗಿತ್ತು. ಇದರ ನಾಲ್ಕನೇ ಅಧ್ಯಾಯದಲ್ಲಿ ಕೆಲವು ಪ್ರಮುಖ ದಿನಾಂಕವನ್ನು ದಾಖಲಿಸಲಾಗಿದೆ. ಆ ದಿನಗಳಂದು ಸೈನ್ಯವು ತೋಪ್ ಸಲಾಮಿ (ಗನ್ ಸೆಲ್ಯೂಟ್) ನೀಡಬೇಕೆಂದು ಟಿಪ್ಪು ಆದೇಶವನ್ನು ನೀಡಿರುತ್ತಾನೆ.
ಈ ವಿಶೇಷ ದಿನಾಂಕಗಳಲ್ಲಿ ಒಂದು ಟಿಪ್ಪುವಿನ ಜನ್ಮ ದಿನಾಂಕಕ್ಕೆ ಸಂಬಂಧಿಸಿದಾಗಿದ್ದು ಇದರ ಕನ್ನಡ ಸಾರಾಂಶ ಏನೆಂದರೆ `ದೇವರ ಆಶೀರ್ವಾದದಿಂದ ಜನ್ಮ ದಿನಾಂಕದಂದು ಆಚರಿಸುವ ಸಂತೋಷದ ಆಚರಣೆ. ಜಕ್ರಿ ಮಾಸದ ಹದಿನಾಲ್ಕನೆಯ ದಿನ ವರ್ಷ 1165 ಹಿಜ್ರಿ – ಪ್ರತಿ ವರ್ಷ ಈ ದಿನದಂದು ಸೂರ್ಯೋದಯ ಆದ ಹತ್ತು ಗಂಟೆಗಳ ನಂತರ ಮೂವತ್ತೊಂದು ತೋಪಿನ ಸಲಾಮಿಯನ್ನು ನೀಡಬೇಕು. ಇದರಲ್ಲಿ ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಪಾಲ್ಗೊಳ್ಳಬೇಕು’ ಎಂದಿದೆ.
ಹಿಜ್ರಿ ಪದದ ಹಿಂದೆ ಬಿದ್ದಾಗ ಸತ್ಯಾಂಶ ಅನಾವರಣ | ಹಸ್ತ ಪ್ರತಿಯಲ್ಲಿ ನಮೂದಿಸಿದ ಹಿಜ್ರಿ 1,165 ನಿಧಿನ್ ಓಲಿಕೆರ ಅವರ ಗಮನ ಸೆಳೆದಿತ್ತು. ಏಕೆಂದರೆ, ಇಲ್ಲಿಯ ವರೆಗೂ ನಾವುಗಳೆಲ್ಲ ಟಿಪ್ಪು ಹುಟ್ಟಿದ ವರ್ಷ ಹಿಜ್ರಿ 1163 ಎಂದು ಭಾವಿಸಿದ್ದು, ಆಂಗ್ಲ ಕ್ಯಾಲೆಂಡರ್ ಪ್ರಕಾರ 20 ನವೆಂಬರ್ 1750 ಎಂದಾಗುತ್ತದೆ.
https://www.suddikanaja.com/2021/01/31/talagunda-inscription/
ಈ ದಿನಾಂಕವನ್ನು ಮೀರ್ ಹುಸೇನ್ ಕಿರ್ಮಾನಿ ಅವರು ನೀಡಿದ್ದರು. ಈತ ಟಿಪ್ಪುವಿನ ಮರಣ ಹೊಂದಿದ ಮೂರು ವರ್ಷಗಳ ಬಳಿಕ ಹೈದರಿನ ಜೀವನ ಚರಿತ್ರೆ ಆಧಾರಿಸಿ ಬರೆದ ಪುಸ್ತಕ `ನಿಶಾನ್ ಐ ಹೈದರ್’ನಲ್ಲಿ ಈ ದಿನಾಂಕವನ್ನು ನೀಡಿರುತ್ತಾನೆ. ಟಿಪ್ಪುವಿಗೆ ಸಂಬಂದಿಸಿದ ಇನ್ನಷ್ಟು ದಾಖಲೆಗಳನ್ನು ಹುಡುಕುವಾಗ ನಿಧಿನ್ ಓಲಿಕೆರ ಅವರಿಗೆ ಎರಡು ಮಹತ್ವಪೂರ್ಣ ಹಸ್ತಪ್ರತಿಗಳು ಸಿಗುತ್ತವೆ.
ಜನ್ಮ ದಿನಾಂಕ ಖಾತ್ರಿ ಪಡಿಸುವ ಪುರಾವೆಗಳು | ಮೂರನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಮೈಸೂರಿನ ಶಿಬಿರವನ್ನು ಸ್ವಾಧೀನ ಪಡಿಸಿಕೊಂಡಾಗ ಟಿಪ್ಪುವಿಗೆ ಸಂಬಂಧಿಸಿದ ಪರ್ಷಿಯನ್ ಭಾಷೆಯ ಅಮೂಲ್ಯ ಹಸ್ತಪ್ರತಿ ಲಭಿಸಿದೆ. ಪುಟ ಸಂಖ್ಯೆ 42ರಲ್ಲಿ ನಮೂದಿಸಿರುವ ರೇಗುಲೇಷನ್ 71ರಲ್ಲಿ ಟಿಪ್ಪುವಿನ ಜನ್ಮ ದಿನಾಂಕದ ಬಗ್ಗೆ ಮಾಹಿತಿ ನೀಡುತ್ತದೆ.
ಇನ್ನೂ ಬ್ರಿಟಿಷ್ ಸಂಗ್ರಹಾಲಯದಲ್ಲಿ ಟಿಪ್ಪುವಿನ ಜನ್ಮ ದಿನಾಂಕ ಸಂಬಂಧಿಸಿದಂತೆ ಇನ್ನೊಂದು ದಾಖಲೆ ನಿಧಿನ್ ಓಲಿಕೆರ ಅವರ ಕೈಸಿಕ್ಕಿತ್ತು. ಟಿಪ್ಪುವಿನ ಮರಣಾನಂತರ ಅವನ ಅರಮನೆಯಿಂದ ಸ್ವಾಧೀನ ಪಡಿಸಿಕೊಂಡ ಒಂದು ಹಸ್ತಪ್ರತಿ ಟಿಪ್ಪುವಿನ ಜನ್ಮ ರಹಸ್ಯವನ್ನು ಬೇಧಿಸುತ್ತದೆ. ಲಂಡನ್ ಬ್ರಿಟೀಷ್ ಸಂಗ್ರಹಾಲಯದ ಕ್ಯುರೇಟರ್ ಉರ್ಸುಲಾ ಸಿಮ್ಸ್ ವಿಲಿಯಮ್ಸ್ ಈ ಹಸ್ತಪ್ರತಿಯಲ್ಲಿ ಟಿಪ್ಪುವಿನ ಜನ್ಮ ದಿನಾಂಕವನ್ನು ಉಲ್ಲೇಖ ಮಾಡಿರುವ ಟಿಪ್ಪಣಿಯ ಫೆÇೀಟೋ ಪ್ರತಿ ಕೂಡ ಲಭಿಸಿದೆ. ಈ ದಾಖಲೆ, ಪುರಾವೆಗಳನ್ನು ಪರಿಶೀಲಿಸಿದ ಬಳಿಕ ಟಿಪ್ಪುವಿನ ಜನ್ಮ 1165 ಹಿಜ್ರಿ ವರ್ಷದ ತುಳುವಿ ಮಾಸದ ಹದಿನಾಲ್ಕನೇಯ (14) ದಿನಾಂಕದಂದು ಎಂದು ಸ್ಪಷ್ಟಪಡಿಸುತ್ತದೆ. 14ನೇ ತುಳುವಿ ಎಂಬ ಬಗ್ಗೆ ಸಂಶೋಧನೆ ಕೈಗೊಳ್ಳಲು ಸುದೀರ್ಘ ಅವಧಿಯೇ ತಗುಲಿದೆ.
ಟಿಪ್ಪು ಮೈಸೂರಿನ ರಾಜ್ಯಭಾರದ ಚುಕ್ಕಾಣಿ ಹಿಡಿದ ಐದನೇ ವರ್ಷದಲ್ಲಿ ಮೌಲೂದಿ ಪಂಚಾಂಗವನ್ನು ಪ್ರಾರಂಭಿಸುತ್ತಾನೆ. ಮುಸಲ್ಮಾನರು ಚಂದ್ರನ ಗ್ರಹಗತಿ ಅವಲಂಬಿಸುವ ಹಿಜ್ರಿ ಪಂಚಾಂಗವನ್ನು ಅನುಸರಿಸಿದರೆ ಇನ್ನೂ ಕೆಲವರು ಸೂರ್ಯನ ಗ್ರಹಗತಿಯನ್ನು ಅವಲಂಬಿಸುವ ಸೌರಮಾನ ಪಂಚಾಂಗವನ್ನು ಅನುಸರಿಸುತ್ತಿದ್ದು, ಇದರಿಂದ ಆದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಟಿಪ್ಪು ಹೊಸದಾದ ಮೌಲೂದಿ ಪಂಚಾಂಗವನ್ನು ಪರಿಚಯಿಸುತ್ತಾನೆ.
https://www.suddikanaja.com/2021/04/03/bhanumati-birth-to-baby/
ಮೈಸೂರಿನಲ್ಲಿ ಕಂದಾಯವನ್ನು ಚಾಂದ್ರಮಾನ ಪಂಚಾಂಗ ಮತ್ತು ಭತ್ತದ ಕೊಯ್ಲಿನ ಮೇಲಿನ ಕರವನ್ನು ಸೌರಮಾನ ಪಂಚಾಂಗದ ಅನುಸಾರ ವಸೂಲಿ ಮಾಡುತ್ತಿದ್ದು ಸೌರಮಾನ ಆಧಾರಿತ ಪಂಚಾಂಗದಲ್ಲಿ ಹಿಜ್ರಿ ಪಂಚಾಂಗಗಿಂತ 11 ದಿನಗಳು ಹೆಚ್ಚುವರಿ ಇದ್ದದ್ದರಿಂದ ರೈತರು ಹೆಚ್ಚುವರಿ ಕರವನ್ನು ನೀಡಬೇಕಾಗಿತ್ತು. ಈ ಸಮಸ್ಯೆಯನ್ನು ನಿವಾರಿಸಲು ಟಿಪ್ಪು ಮೌಲೂದಿ ಪಂಚಾಂಗಕ್ಕೆ ಚಾಲನೆ ನೀಡುತ್ತಾನೆ. ಅರಬ್ ಪದವಾದ `ಮೌಲೂದಿ ಐ ಮುಹಮ್ಮದ್’ ಅಂದರೆ ಮುಹಮ್ಮದ್ ಪೈಗಂಬರ್ ಅವರ ಜನ್ಮ ವರ್ಷವನ್ನು ಆಧರಿಸಿ ಸಿದ್ಧಪಡಿಸಿದ ಪಂಚಾಂಗವೇ `ಮೌಲೂದಿ’ ಪಂಚಾಂಗ.
ಮೌಲೂದಿ ಪಂಚಾಂಗ ಮಹಮದ್ ಪೈಗಂಬರ್ ಅವರು ಹುಟ್ಟಿದ ವರ್ಷ ಅಂದರೆ 572 ಎಡಿ ಇಂದ ಪ್ರಾರಂಭಗೊಂಡು ಅಹ್ಮದಿ ಮಾಸದಿಂದ ಶುರುವಾಗಿ ಹನ್ನೆರಡನೆಯ ಮಾಸವಾದ ಬಯಾಜಿ (ರಬಾನಿ) ಜೊತೆಗೆ ಅಂತ್ಯಗೊಳ್ಳುತ್ತದೆ.
ಇನ್ನೊಂದು ವಿಶೇಷ ಅಂದರೆ ಮೌಲದಿ ಪಂಚಾಂಗ ಹಿಂದುಗಳ ಚಾಂದ್ರಮಾನ ಪಂಚಾಂಗಕ್ಕೆ ಸರಿಸಮಾನವಾಗಿದ್ದು ಅಹ್ಮದಿ ಮಾಸ ಚೈತ್ರ ಮಾಸಕ್ಕೆ ಸಮಾನಾವಾದರೆ ಕೊನೆಯ ಮಾಸ ಬಯಾಜಿ ಫಾಲ್ಗುಣ ಮಾಸಕ್ಕೆ ಸಮಾನವಾಗಿರುತ್ತದೆ. ಇನ್ನೂ ಈ ಮೌಲೂದಿ ಪಂಚಾಂಗದ ಒಂಭತ್ತನೆಯ ಮಾಸದ ಹೆಸರು `ತುಳುವಿ’ ಆಗಿದೆ. ಇದು ಹಿಂದೂ ಪಂಚಾಂಗದ `ಮಾರ್ಗಶಿರ’ ಮಾಸಕ್ಕೆ ಸಮನಾಗಿರುತ್ತದೆ. ಸಂಶೋಧನೆಯ ನಂತರ 1165 ಹಿಜ್ರಿ ವರ್ಷದ ತುಳುವಿ ಮಾಸದ ಹದಿನಾಲ್ಕನೇಯ (14) ದಿನಾಂಕ ಆಂಗ್ಲ (ಗ್ರೆಗೋರಿಯನ್) ಕ್ಯಾಲೆಂಡರ್ ಪ್ರಕಾರ 1ನೇ ಡಿಸೆಂಬರ್ 1751 ಆಗಿರುತ್ತದೆ.
ಸಂಶೋಧನೆಗೆ ಸಹಕಾರ ನೀಡಿದವರು | ಮೌಲೂದಿ ಪಂಚಾಂಗವನ್ನು ದೃಢೀಕರಿಸಲು ನಡೆಸಿದ ಹಲವಾರು ಪರೀಕ್ಷಾ ಪ್ರಯೋಗಗಳಲ್ಲಿ ನಿಧಿನ್ ಅವರಿಗೆ ಗೂಗಲ್ ಸಂಸ್ಥೆಯ ಮಾಜಿ ಉದ್ಯೋಗಿ ವಿಶ್ವಾಸ್, ಮದ್ರಾಸ್ ಐಐಟಿಯ ಪೆÇ್ರ.ರಾಮನ್ ಅವರ ಸಹಾಯ ಹಾಗೂ ಮಾರ್ಗದರ್ಶನ ನೀಡಿದ್ದಾರೆ.
ಮೈಸೂರಿನ ಪ್ರಸಿದ್ಧ ಇತಿಹಾಸಕಾರ ಪ್ರೊ.ಶೇಖ್ ಅಲಿ ಅವರು ಟಿಪ್ಪುವಿನ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ನಿಧಿನ್ ಅವರು ನಡೆಸಿದ ಸಂಶೋಧನೆಯನ್ನು ಅವಲೋಕಿಸಿ ಅದಕ್ಕೆ ಅನುಮೋದನೆಯನ್ನು ನೀಡಿದ್ದಾರೆ.
ಎರಡು ವರ್ಷಗಳ ಸುದೀರ್ಘ ಅಧ್ಯಯನ ಮತ್ತು ಸಂಶೋಧನೆ ಮೂಲಕ ಟಿಪ್ಪುವಿನ ಜನ್ಮ ದಿನಾಂಕ 1ನೇ ಡಿಸೆಂಬರ್ 1751 ಎಂದು ಪುರಾವೆಗಳೊಂದಿಗೆ ಸಾಬೀತು ಆಗಿದೆ ಎಂದು ಸಂಶೋಧಕರು ಮಾಹಿತಿ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಇತಿಹಾಸ ತಜ್ಞ ಅಜಯ್ ಶರ್ಮಾ ಉಪಸ್ಥಿತರಿದ್ದರು.
https://www.suddikanaja.com/2021/02/14/kunchatiga-community-meeting-in-shivamogga-demand-for-central-obc/