ಈ ಸಲ ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ಆಚರಣೆಗೆ ಗ್ರೀನ್ ಸಿಗ್ನಲ್

 

 

ಸುದ್ದಿ ಕಣಜ.ಕಾಂ | DISTRICT | DASARA FESTIVAL
ಶಿವಮೊಗ್ಗ: ಕಳೆದ ವರ್ಷ ಕೋವಿಡ್ ಹಿನ್ನೆಲೆ ದಸರಾ ಅನ್ನು ಸರಳವಾಗಿ ಮಾಡಲಾಗಿತ್ತು. ಆದರೆ, ಈ ಸಲ ಅದ್ಧೂರಿ ಆಚರಣೆ ಮಾಡುವಂತೆ ಒತ್ತಾಯಿಸಲಾಗಿದೆ.
ಮೇಯರ್ ಸುನೀತಾ ಅಣ್ಣಪ್ಪ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸಂಜೆ ಕರೆದಿದ್ದ ಸಭೆಯಲ್ಲಿ ಪಾಲಿಕೆ ಸರ್ವ ಸದಸ್ಯರು ಸಂಭ್ರಮ ದಸರಾ ಆಚರಣೆಗೆ ಮನವಿ ಮಾಡಿದರು.]

dasara meeting
ಶಿವಮೊಗ್ಗ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಮಾತನಾಡಿದರು.

ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ದಸರಾ ಹಬ್ಬ ಆಚರಣೆಗಾಗಿ ಸರ್ಕಾರಕ್ಕೆ 2 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿರುವುದು ಅಭಿನಂದನಾರ್ಹ. ಈ ಅನುದಾನದೊಂದಿಗೆ ಪಾಲಿಕೆಯ ಬಜೆಟ್ 50 ಲಕ್ಷ ರೂ. ಮತ್ತು ಇತರೆ ಉಳಿಕೆ ಅನುದಾನ ಸೇರಿಸಿ, ಸಮಿತಿಗಳನ್ನು ರಚಿಸಿ ಈ ಬಾರಿ ಅದ್ದೂರಿ ಹಬ್ಬ ಆಚರಿಸುವಂತೆ ಸಲಹೆ ನೀಡಿದರು.

ಸದಸ್ಯ ನಾಗರಾಜ್ ಕಂಕಾರಿ, ಸಾಂಪ್ರದಾಯಿಕ ಅದ್ಧೂರಿತನಕ್ಕೆ ಒತ್ತು ನೀಡಬೇಕು. ಬಜೆಟ್ ಮತ್ತು ಹಬ್ಬದ ಮಾರ್ಗಸೂಚಿ ನಿಗದಿಯಾದ ನಂತರ ಸಭೆ ನಡೆಸಿ ನಿರ್ಧರಿಸುವುದು ಒಳಿತು ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗನಾಥ್, ಸದಸ್ಯರಾದ ರಮೇಶ್ ಹೆಗ್ಡೆ ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಬಾರಿ ವೈಭವದ ದಸರಾ ಆಚರಣೆಗೆ ಹಾಗೂ ಮೈಸೂರಿನಲ್ಲಿ ಆಚರಿಸುವಂತೆ 9 ದಿನಗಳ ಆಚರಣೆಗೆ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಆಗಿಲ್ಲ

ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ಮಾತನಾಡಿ, ದಸರಾ ಆಚರಣೆಗೆ ಸರ್ಕಾರದಿಂದ ಇದುವರೆಗೆ ಯಾವುದೇ ಮಾರ್ಗಸೂಚಿ ಬಿಡುಗಡೆ ಆಗಿಲ್ಲ. ಪ್ರಸ್ತುತ ಮಾರ್ಗಸೂಚಿಯಂತೆ ಮದುವೆ, ಇತರೆ ಸಮಾರಂಭ ಹೊರತುಪಡಿಸಿ ಸಾರ್ವಜನಿಕ ಕಾರ್ಯಕ್ರಮ ಮಾಡುವಂತಿಲ್ಲ. ಸಭಾಂಗಣದ ಶೇ.50 ಆಸನ ವ್ಯವಸ್ಥೆಯಲ್ಲಿ ಸಮಾರಂಭ ನಡೆಸಬೇಕು. ನಗರದಲ್ಲಿ ಪ್ರಸ್ತುತ 16 ಕಂಟೈನ್‍ಮೆಂಟ್ ವಲಯಗಳಿದ್ದು 78 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದರು.
ಬಜೆಟ್ ನಿಗದಿಗೆ ಸಂಬಂಧಿಸಿದಂತೆ ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್ ಬಿಡುಗಡೆಯಾಗದೆ ಸರಳ ಆಚರಣೆ ಮಾಡಲಾಗಿತ್ತು. ಈ ಬಾರಿ ದಸರಾ ಆಚರಣೆಗೆ 2 ಕೋಟಿ ರೂ.ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ.70.17 ಆದಾಯ ತೆರಿಗೆ ಸಂಗ್ರಹ ಆಗಿದ್ದು ಶೇ.100 ಸಂಗ್ರಹವಾದರೆ 50 ಲಕ್ಷ ರೂ. ಆಚರಣೆಗೆ ನಿಗದಿಪಡಿಸಲಾಗುವುದು ಎಂದರು.
ಸದಸ್ಯೆ ಅನಿತಾ ರವಿಶಂಕರ್, ಧೀರರಾಜ್, ಮಂಜುನಾಥ್, ಆರ್.ಸಿ.ನಾಯಕ್ ಇತರ ಸದಸ್ಯರು ಭಾಗವಹಿಸಿದ್ದರು.

https://www.suddikanaja.com/2021/05/11/wrestler-srinivas-died-due-to-corona/

error: Content is protected !!