`ಎಂಪಿಎಂ ನೆಡುತೋಪು ಖಾಸಗಿಯವರಿಗೆ ನೀಡಿದರೆ ಮಲೆನಾಡಿಗರ ತಾಕತ್ತು ತೋರಿಸುವೆವು’

 

 

ಸುದ್ದಿ ಕಣಜ.ಕಾಂ
ಬೆಂಗಳೂರು /ಶಿವಮೊಗ್ಗ: ಎಂಪಿಎಂ ನೆಡುತೋಪು ಖಾಸಗಿಯವರಿಗೆ ನೀಡುವ ಪ್ರಸ್ತಾಪ ಕೈಬಿಡದಿದ್ದರೆ ಮಲೆನಾಡಿಗರ ತಾಕತ್ತು ತೋರಿಸಬೇಕಾಗುತ್ತದೆ. ಇಷ್ಟಕ್ಕೂ ಮಣಿಯದಿದ್ದರೆ, ಖಾಸಗಿ ಪರ ಲಾಬಿಯ ಬಗ್ಗೆ ಅರಣ್ಯ ಇಲಾಖೆಯನ್ನೇ ಪಾರ್ಟಿ ಮಾಡಿ ಗೋದಾವರ್ಮನ್ ಪ್ರಕರಣದ ಕುರಿತ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದೇ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಲಾಯಿತು.
ಗುರುವಾರ ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಸಭೆಯಲ್ಲಿ  ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದಿಂದ ಪಿಸಿಸಿಎಫ್’ಗೆ ಭೇಟಿ ನೀಡಿದ ನಿಯೋಗ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿಕೊಟ್ಟಿತು.
80 ಸಾವಿರ ಎಕರೆಯಷ್ಟು ಅಪಾರ ಎಂಪಿಎಂ ನೆಡುತೋಪು ಭೂಮಿಯನ್ನು ಖಾಸಗಿಯವರಿಗೆ ನೀಡುವ ಪ್ರಸ್ತಾಪ ಕೂಡಲೇ ಕೈಬಿಟ್ಟು, ಗುತ್ತಿಗೆ ಅವಧಿ ಮುಗಿದಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಎಂಪಿಎಂ ಕಾರ್ಖಾನೆ ನೆಪದಲ್ಲಿ ಮಲೆನಾಡಿಗರ ಹಕ್ಕು ಮತ್ತು ಇಡೀ ರಾಜ್ಯದ ಶ್ವಾಸಕೋಶದಂತೆ ಇರುವ ಮಲೆನಾಡಿನ ಅರಣ್ಯವನ್ನು ಖಾಸಗೀ ಕಾರ್ಪೊರೇಟ್ ಕಂಪನಿಗಳಿಗೆ ಪರಭಾರೆ ಮಾಡುವ ಪ್ರಯತ್ನಗಳ ವಿರುದ್ಧ ಮಲೆನಾಡಿನಲ್ಲಿ ದೊಡ್ಡ ಮಟ್ಟದ ಪ್ರತಿರೋಧ ಹೋರಾಟ ಭುಗಿಲೇಳಲಿದೆ ಎಂದು ಎಚ್ಚರಿಕೆ ನೀಡಲಾಯಿತು. ಸಮಾಲೋಚನೆಯ ಬಳಿಕ ಈ ಕುರಿತು ಅರಣ್ಯ ಸಚಿವರ ಗಮನಕ್ಕೆ ಶೀಘ್ರವೇ ತರುವ ಭರವಸೆಯನ್ನು ಪಿಸಿಸಿಎಫ್-1 ಅವರು ನೀಡಿದ್ದಾರೆಂದು ನಿಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ನಿಯೋಗದಲ್ಲಿ ಕೆ.ಟಿ. ಗಂಗಾಧರ್, ಕೆ.ಪಿ. ಶ್ರೀಪಾಲ್, ಡಾ. ರಾಜೇಂದ್ರ ಚೆನ್ನಿ, ಎಚ್.ಬಿ. ರಾಘವೇಂದ್ರ, ರಾಜೇಂದ್ರ ಕಂಬಳಗೆರೆ, ಅಖಿಲೇಶ್ ಚಿಪ್ಪಳಿ, ಶಶಿ ಸಂಪಳ್ಳಿ, ಎಂ.ಗುರುಮೂರ್ತಿ, ಪ್ರೊ. ಕೃಷ್ಣಮೂರ್ತಿ ಹಿಳ್ಳೋಡಿ, ರವಿ ಹರಿಗೆ, ಮಾಲತೇಶ್ ಬೊಮ್ಮನಕಟ್ಡೆ, ಮಂಜುನಾಥ್ ನವುಲೆ, ವೀರೇಶ್, ವಕೀಲ ಕಾಶೀನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!