Guest Column | ಉತ್ತರ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಪ್ರಾಚೀನತೆ

 

 

ನೆಲ, ಜಲ, ನಾಡು ನುಡಿ ಇವೆಲ್ಲ ಅಭಿಮಾನದ ಭಾವ ಜಾಗೃತಿಗೆ ಕಾರಣವಾಗುವ ಸಂವೇದನಾಶೀಲ ಸಂಗತಿಗಳು.
ಅದರಲ್ಲೂ ನವೆಂಬರ್ ಮೊದಲ ವಾರದಲ್ಲಂತೂ ಕನ್ನಡ ಭಾಷೆಯ ಮೇಲೆ ಎಲ್ಲಿಲ್ಲದ ಅಭಿಮಾನವೋ ಅಭಿಮಾನ!
ಆದರೆ, ಈ ಅಭಿಮಾನ ಒಂದು ದಿನದ ತೋರಿಕೆಗೆ ಆಗದೆ ಪ್ರತಿ ದಿನವೂ ಪ್ರಾಯೋಗಿಕವಾಗಿ ಅಸ್ತಿತ್ವಕ್ಕೆ ಬಂದಾಗ ಮಾತ್ರ ಕನ್ನಡಕ್ಕೊಂದು ಸಾರ್ಥಕ ಭಾವ ಬರಲು ಸಾಧ್ಯ. ಕನ್ನಡ ಭಾಷೆಗೆ ಸುಮಾರು 1,600 ವರ್ಷಗಳ ಸುದೀರ್ಘ ಮತ್ತು ಸ್ಪಷ್ಟ ಚಾರಿತ್ರಿಕ ಹಿನ್ನೆಲೆ ಇದೆ.

Talagunda Inscription
ಕನ್ನಡದ ಮೊದಲ ಶಾಸನ, ತಾಳಗುಂದದ ಸಿಂಹಕಟಾಂಜನ ಶಾಸನ

ಇಂತಹ ಒಂದು ಸುಂದರ ಭಾಷೆಯ ಅಥವಾ ಲಿಪಿಯ ಪ್ರಾಚೀನತೆಯ ಬಿಂಬ ಉತ್ತರ ಕನ್ನಡದ ನೆಲದಲ್ಲಿದೆ ಎಂದರೆ ನಂಬಲೇಬೇಕು!
ಅಚ್ಚರಿ ಎನಿಸಿದರೂ ಇದು ನಿಜ. ಕನ್ನಡ ಲಿಪಿಯ ಮೂಲ ‘ಬ್ರಾಹ್ಮಿ ಲಿಪಿ’, ಬ್ರಾಹ್ಮಿಯ ಮೂಲ ‘ಸಿಂಧೂ ಲಿಪಿ’ ಇರಬಹುದೆಂಬ ಅಭಿಪ್ರಾಯವೂ ಇದೆ. ಅದನ್ನು ತಳ್ಳಿ ಹಾಕಲಾಗದು. ಆದರೆ, ಇದು ಏಕಾಏಕಿಯಾಗಿ ತೀರ್ಮಾನಿಸುವ ಸಂಗತಿಯಲ್ಲ. ಈ ನೆಲೆಯಲ್ಲೇ ವಿಶೇಷ ಅಧ್ಯಯನವಾದ್ದಲ್ಲಿ ಇನ್ನೂ ವಿಸ್ತøತವಾಗಿ ನಿರ್ಧರಿಸಬಹುದು. ಸಿಂಧೂ ನಾಗರಿಕತೆಯ ಲಿಪಿಯೇ ಪರಿಷ್ಕøತಗೊಂಡು ಬ್ರಾಹ್ಮಿಯಾಗಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದು ಮೌರ್ಯರ ಅಶೋಕನ ಕಾಲದಲ್ಲಿ. ಇದಕ್ಕೆ ಆಗ ಹೊಂದಿಕೊಂಡ ಭಾಷೆ `ಪ್ರಾಕೃತ’. ಇದು ಶಾತವಾಹನ ಕಾಲದಲ್ಲೂ ಮುಂದುವರೆಯಿತು. ನಂತರ ದಕ್ಷಿಣದಲ್ಲಿ ಇದೇ ಬ್ರಾಹ್ಮಿ ಲಿಪಿ ಪ್ರಾದೇಶಿಕತೆಯ ಪ್ರಭಾವದಿಂದ ರೂಪಾಂತರಗೊಳ್ಳುತ್ತಾ ತಮಿಳು, ಮಲೆಯಾಳಿ ಹಾಗೂ ಕನ್ನಡದ ಲಿಪಿಗಳ ಉಗಮಕ್ಕೂ ಕಾರಣವಾಯಿತು.
ಕನ್ನಡ ಲಿಪಿಯ ಉಗಮ ಹಾಗೂ ವಿಕಾಸದ ಚರಿತ್ರೆಯನ್ನೊಮ್ಮೆ ಗಮನಿಸಿದರೆ ಕಾಲದಿಂದ ಕಾಲಕ್ಕೆ ವಿಕಾಸದ ಹಂತಗಳನ್ನು ತಜ್ಞರು ಸ್ಪಷ್ಟವಾಗಿ ಗುರುತಿಸಿ ಕೊಟ್ಟಿದ್ದಾರೆ. ಡಾ.ಎಸ್.ಶೆಟ್ಟರ್, ಡಾ.ದೇವರ ಕೊಂಡಾರೆಡ್ಡಿ ಅವರಂತಹವರು ಈ ಕುರಿತು ತಲಸ್ಪರ್ಶಿ ಅಧ್ಯಯನ ಮಾಡಿದ್ದು ಇಲ್ಲಿ ಉಲ್ಲೇಖನೀಯ. ಅಶೋಕನ ಕಾಲದ ಈ ಬ್ರಾಹ್ಮಿ ಬದಲಾವಣೆಯ ಜಾಡು ಹಿಡಿದದ್ದೇ ಶಾತವಾಹನ ಮತ್ತು ಚುಟುಗಳ ಕಾಲದಲ್ಲಿ. ಹೀಗೆ ಬದಲಾವಣೆಯ ಸೂಚನೆಯ ಶಾಸನಗಳು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕಾಣಬಹುದು.
ಹಲ್ಮಿಡಿಗಿಂತ ಹಿಂದಿನ ಶಾಸನ | ಬನವಾಸಿಯಲ್ಲಿನ ಎರಡು ಮತ್ತು ಮೂರನೇ ಶತಮಾನದ ಶಾಸನಗಳೇ ಬ್ರಾಹ್ಮಿಯಿಂದ ಕನ್ನಡ ಬ್ರಾಹ್ಮಿಗೆ ಲಿಪಿ ಬದಲಾವಣೆಯಾದ ಲಕ್ಷಣವನ್ನು ತೋರಿಸುತ್ತವೆ. ಹಾಗೆಯೇ ಕನ್ನಡ ಭಾಷೆಗೆ ಮೊಟ್ಟ ಮೊದಲ ಬಾರಿಗೆ ಶಾಸನದಲ್ಲಿ ಸ್ಥಾನ ಕಲ್ಪಿಸಿಕೊಟ್ಟ ಕೀರ್ತಿಯೂ ಬನವಾಸಿಯ ಕದಂಬರಿಗೇ ಸಲ್ಲುತ್ತದೆ. ಕಾಕುತ್ಸ ವರ್ಮನ ಕಾಲದಿಂದ ಪ್ರಾಕೃತ ಮತ್ತು ಸಂಸ್ಕøತದ ಜೊತೆ ಕನ್ನಡಕ್ಕೂ ಶಾಸನದಲ್ಲಿ ಸ್ಥಾನ ದೊರಕಿತ್ತು ಎಂದು ತಿಳಿದಿದ್ದೆವು. ಆದರೆ, ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ಬನವಾಸಿ ಸಮೀಪದ ಶಿಕಾರಿಪುರ ತಾಲೂಕಿನ ತಾಳಗುಂದದಲ್ಲಿ ಉತ್ಖನನ ವೇಳೆ ದೊರಕಿದ `ಸಿಂಹಕಟಾಂಜನ’ ಶಾಸನ ಹಲ್ಮಿಡಿಗಿಂತ ಹಿಂದಿನದಾಗಿದೆ. ಅದೂ ಕನ್ನಡದ ಶಾಸನವೇ ಆಗಿರುವುದೂ ಕನ್ನಡ ಭಾಷೆಯ ಪ್ರಾಚೀನತೆಯನ್ನೂ ಮತ್ತಷ್ಟು ಹಿಂದಕ್ಕೆ ಕೊಂಡೊಯ್ಯಲು ನೆರವಾಗಿದೆ.
ಅಂದರೆ, ನಾಲ್ಕನೇ ಶತಮಾನದಲ್ಲೇ ಸ್ಪಷ್ಟವಾಗಿ ಕನ್ನಡದ ಲಿಪಿ ಬ್ರಾಹ್ಮಿಯಿಂದ ಕವಲೊಡೆದಿತ್ತು. ಹೀಗಾಗಿ, ಕನ್ನಡ ಭಾಷೆ ಮೂರನೇ ಶತಮಾನಕ್ಕಿಂತ ಮೊದಲೇ ಮೌಖಿಕವಾಗಿ ಜನಮಾನಸದಲ್ಲಿದ್ದರೂ ಅದು ಶಾಸನ ಭಾಷೆಯಾಗಿ ಬರಲು ಸ್ವಲ್ಪ ಸಮಯ ತೆಗೆದುಕೊಂಡಿರಬೇಕು. ಏನೇ ಆದರೂ ಈ ಪ್ರಕ್ರಿಯೆ ಉತ್ತರ ಕನ್ನಡದ ಬನವಾಸಿಯ ಕದಂಬರ ಮುಖೇನ ಅವರದೇ ನೆಲದಲ್ಲಿ ಆಗಿತ್ತೆಂಬುದು ವಿಶೇಷ ಸಂಗತಿ.

Banavasi
ಬನವಾಸಿ

ಆರನೇ ಶತಮಾನದ ನಂತರ ಅಂದರೆ ಬನವಾಸಿ ಕದಂಬರ ಕೊನೆಯ ಕಾಲದಲ್ಲಿ ಕದಂಬರು ಜೈನ ಮತಕ್ಕೆ ಆದ್ಯತೆ ಕೊಡಲು ಆರಂಭಿಸಿದ ನಂತರವಂತೂ ಕನ್ನಡ ಭಾಷೆಗೆ ನೀಡುವ ಪ್ರಾಮುಖ್ಯತೆಯ ತೀವ್ರತೆ ಹೆಚ್ಚಾಯಿತು. ಕನ್ನಡ ಭಾಷೆಗೆ ಜೈನರ ಕೊಡುಗೆ ಅಪಾರವಾಗಿದೆ. ಪ್ರಾಕೃತಕ್ಕೆ ಬೌದ್ಧರ, ಕನ್ನಡಕ್ಕೆ ಜೈನರ, ಸಂಸ್ಕøತಕ್ಕೆ ಬ್ರಾಹ್ಮಣರ ಕೊಡುಗೆ ಅನನ್ಯವಾಗಿದೆ (ಪ್ರಾಚೀನ ಕಾಲಕ್ಕೆ ಅನ್ವಯವಾಗುವಂತೆ, ಜೊತೆಗೆ ಎಲ್ಲ ಭಾಷೆಗೂ ಎಲ್ಲ ಸಮುದಾಯದ ಕೊಡುಗೆಯೂ ಇದ್ದೇ ಇದೆ.) ಭಾಷೆ ಎಂಬುದು ಧರ್ಮಾತೀತ, ಜಾತ್ಯತೀತ. ಆದರೆ, ಈ ತರಹದ ಕಲ್ಪನೆ ಹೊಸತೊಂದು ಅಧ್ಯಯನಕ್ಕೆ ನಾಂದಿ ಆಗುವುದೆಂಬ ವಿಚಾರಕ್ಕೆ ಪ್ರಸ್ತಾಪಿಸಿದೆ ಅಷ್ಟೇ. ಬದಲಾಗಿ ಆ ಭಾಷೆ ಇವರ ಸೊತ್ತು; ಈ ಭಾಷೆ ಅವರ ಸೊತ್ತು ಎಂಬ ಸಂಕುಚಿತ ಧೋರಣೆಗಲ್ಲ. ಅದೇನೇ ಇದ್ದರೂ ಕನ್ನಡ ಭಾಷೆಯ ಪ್ರಾಚೀನತೆಯ ಬಿಂಬ ಉತ್ತರ ಕನ್ನಡದ ಮಣ್ಣಿನಲ್ಲಿ ಕಾಣುವುದಂತೂ ಸತ್ಯ.
– ಲೇಖಕರು | ಲಕ್ಷ್ಮೀಶ್ ಸೋಂದಾ, ಇತಿಹಾಸಕಾರರು

error: Content is protected !!