ಸುದ್ದಿ ಕಣಜ.ಕಾಂ | GUEST COLUMN | SPORTS
ಅದು 2012ರ ಲಂಡನ್ ಒಲಿಂಪಿಕ್ಸ್, ಕೆರಿಬಿಯನ್ ದ್ವೀಪದ ಸಣ್ಣ ದೇಶವಾದ ಗ್ರೆನೆಡಾದ ಕ್ರೀಡಾಪಟುವೊಬ್ಬ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ 19 ವರ್ಷದ ಹುಡುಗನನ್ನು ಗೌರವಿಸಲು ಹಾಗೂ ಆತನ ಸಂಭ್ರಮದಲ್ಲಿ ಭಾಗಿಯಾಗಲು ಅಂದಿನ ಗ್ರೆನೆಡಾ ದೇಶದ ನಾಯಕರು ಇಡೀ ರಾಷ್ಟಕ್ಕೆ ಅರ್ಧ ದಿನ ರಜೆ ಘೋಷಿಸಿದ್ದರು.
ಈ ನಾಡಿನ 12 ಲಕ್ಷ ಜನ ಸಂಭ್ರಮಿಸಿ, ಪಟಾಕಿ ಸಿಡಿಸಿದ್ದರು. 400 ಮೀಟರ್ ಓಟದಲ್ಲಿ ಐತಿಹಾಸಿಕ ದಾಖಲೆ ಬರೆದ ಯುವಕನ ಸಾಧನೆಯನ್ನು ಸಂಭ್ರಮಿಸಿ ಕೊಂಡಾಡಿದ್ದರು. ಒಲಿಪಿಂಕ್ಸ್ ಪದಕಕ್ಕೆ ಸಿಗುವ ಗೌರವ ಇದು.
ಕಡಿಮೆ ಜನಸಂಖ್ಯೆ, ಅಗತ್ಯ ಸೌಕರ್ಯಗಳು ಇರದ ಮತ್ತು ಬಡತನವೇ ಪ್ರಧಾನವಾಗಿರುವ ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಬೇಟೆಯಾಡಿ ತಮ್ಮ ನಾಡಿನ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಆದರೆ, ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಕಳೆದ 40 ವರ್ಷಗಳಿಂದ ಒಲಿಂಪಿಕ್ಸ್‍ನಲ್ಲಿ ಗೆದ್ದಿದ್ದು ಒಂದೇ ಬಂಗಾರ ಪದಕ!
https://www.suddikanaja.com/2021/01/31/talagunda-inscription/
ಅತಿ ಹೆಚ್ಚು ಯುವಶಕ್ತಿ ಹೊಂದಿರುವ ರಾಷ್ಟ್ರದ ಖ್ಯಾತಿ
1.4 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶ ಹಾಗೂ ವಿಶ್ವದಲ್ಲಿಯೇ ಅತ್ಯಧಿಕ ಯುವ ಜನಾಂಗವನ್ನು ಹೊಂದಿರುವ ದೇಶ, ಯುವಕರೇ ಪ್ರತಿನಿಧಿಸುವಂತ ಕ್ರೀಡಾ ಹಬ್ಬಗಳಲ್ಲಿ ಪದಕಗಳಿಗೆ ಕೊರಳೊಡ್ಡಲು ವಿಫಲರಾಗುತ್ತಿದ್ದಾರೆ. ಇಲ್ಲಿಯವರೆಗೆ ಒಲಿಂಪಿಕ್ಸ್ ನಲ್ಲಿ ಭಾರತ ಗೆದ್ದಿರುವುದು ಬರೀ 31 ಪದಕ. ಇದರಲ್ಲಿ 9 ಚಿನ್ನ ಉಳಿದವು ಬೆಳ್ಳಿ, ಕಂಚಿನ ಪದಕಗಳು. ಆಶ್ಚರ್ಯವೆಂದರೆ, ಒಬ್ಬ ಮೈಕಲ್ ಫೆಲ್ಫ್ಸ್, ಮತ್ತೊಬ್ಬ ಉಸೇನ್ ಬೋಲ್ಟ್ 20ಕ್ಕೂ ಅಧಿಕ ಪದಕಗಳನ್ನು ಬೇಟೆಯಾಡಿದ್ದಾರೆ. ಇಂತಹ ಒಬ್ಬ ಕ್ರೀಡಾಪಟುವನ್ನು ರೂಪಿಸಲು ದೇಶದ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ.
ಕೆಲ ರಾಜ್ಯಗಳ ಮೇಲುಗೈ
ಒಲಿಂಪಿಕ್ಸ್ ನಲ್ಲಿ ಭಾರತದ ಕೆಲ ರಾಜ್ಯಗಳ ಕ್ರೀಡಾಪಟುಗಳ ಸಾಧನೆ ಮತ್ತು ಭಾಗವಹಿಸುವಿಕೆ ಅಧಿಕ. ಉತ್ತರ, ಈಶಾನ್ಯ ರಾಜ್ಯಗಳ ಅಧಿಕ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಇದಕ್ಕೆ ಕಾರಣ ಆಯಾ ರಾಜ್ಯ ಸರ್ಕಾರಗಳ ಕ್ರೀಡಾ ನೀತಿ. ಹರ್ಯಾಣ, ಪಂಜಾಬ್, ಮಣಿಪುರ ಸೇರಿ ಬೆರಳೆಣಿಕೆ ರಾಜ್ಯಗಳು ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುವುದರಿಂದ ಅಲ್ಲಿನವರೆ ಹೆಚ್ಚಾಗಿ ಭಾಗವಹಿಸುತ್ತಾರೆ. ಅದೇ ದಕ್ಷಿಣ ಭಾರತದ ರಾಜ್ಯಗಳ ಕ್ರೀಡಾಪಟುಗಳ ಸಾಧನೆ ಅಷ್ಟಕಷ್ಟೆ. ಬ್ಯಾಡ್ಮಿಂಟನ್ ಬಿಟ್ಟರೆ ಬೇರೆ ಕ್ರೀಡೆಗಳಿಗೆ ಇಲ್ಲಿ ಹೆಚ್ಚಿನ ಪ್ರೋತ್ಸಾವಿಲ್ಲ. ಇದು ಒಲಿಂಪಿಕ್ಸ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಪ್ರದರ್ಶಿಸಲು ತೊಡಕಾಗಿ ಕಾಡುತ್ತಿದೆ. ಒಬ್ಬ ಕ್ರೀಡಾಪಟು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದರೆ ಕೋಟಿಗಟ್ಟಲೇ ಹಣಕಾಸು ನೆರವು ನೀಡುತ್ತವೆ. ಆದರೆ, ಅದೇ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದ ತರಬೇತಿ ಕೊಡಿಸಲು ಅಗತ್ಯವಾದ ಅನುದಾನ ನೀಡದಿರುವುದು ವಿಪರ್ಯಾಸ. ಈ ಎಲ್ಲ ಹುಳುಕುಗಳನ್ನು ಸರಿಪಡಿಸಿದ್ದಲ್ಲಿ ಖಂಡಿತ ಮುಂದೊಂದು ದಿನ ಭಾರತದ ‘ಚಿನ್ನದ ಕಾರ್ಖಾನೆ’ಯ ಕನಸು ನನಸಾಗಲಿದೆ.
ಪದಕದ ಹಗಲು ಗನಸು, ಪ್ರಭುತ್ವದ ನಿರುತ್ಸಾಹ
ಇದಕ್ಕೆ ಆಡಳಿತ ವ್ಯವಸ್ಥೆಯಲ್ಲಿರುವ ಹುಳುಕುಗಳೇ ಮುಖ್ಯ ಕಾರಣ ಎಂಬುವುದು ಗುಟ್ಟೇನಲ್ಲ. ಒಲಿಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಪದಕದ ಬರ ಎದುರಿಸಲು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡದಿರುವುದು ಮತ್ತು ಮೂಲ ಸೌಕರ್ಯ ಒದಗಿಸದಿರುವುದು ಮೂಲ ಕಾರಣ.
ಅಲ್ಲದೇ, ಜಡ್ಡುಗಟ್ಟಿರುವ ಬಹುತೇಕ ಕ್ರೀಡಾ ಸಂಸ್ಥೆಗಳು ರಾಜಕೀಯ ದಾಳಗಳಾಗಿವೆ. ಬಹುತೇಕ ಕ್ರೀಡಾ ಸಂಸ್ಥೆಗಳ ಪ್ರಮುಖ ಸ್ಥಾನಗಳು ರಾಜಕಾರಣಿಗಳ ಹಿಡಿತದಲ್ಲಿವೆ. ಹೀಗಾಗಿ, ಒಬ್ಬ ಅತ್ಯುತ್ತಮ ಕ್ರೀಡಾಪಟುವನ್ನು ರೂಪಿಸಲು ಇಲ್ಲಿವರೆಗೆ ಸಾಧ್ಯವಾಗಿಲ್ಲ.
ದೇಶಕ್ಕೆ ಪದಕ ಬೇಕು, ಕ್ರೀಡಾಪಟು ಬೇಡ
ಒಲಿಂಪಿಕ್ಸ್ ನಲ್ಲಿ ದೇಶ ಇನ್ನುಳಿದ ರಾಷ್ಟ್ರಗಳಿಗಿಂತ ಅಧಿಕ ಪದಕಗಳನ್ನು ಬಾಚಿಕೊಳ್ಳಬೇಕು ಎಂಬ ಅಭೀಪ್ಸೆ ಎಲ್ಲರಲ್ಲಿದೆ. ಆದರೆ, ತಮ್ಮ ಮಕ್ಕಳು ಕ್ರೀಡಾಪಟು ಆಗಬಾರದು. ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಿ ಕೈತುಂಬ ಸಂಬಳ ತರಬೇಕು ಎಂಬ ಭಾವನೆ ಇದೆಯೇ ವಿನಹ ಕ್ರೀಡಾಪಟುಗಳಾಗಬೇಕು ಎಂಬ ಉತ್ಸುಕತೆ ಇಲ್ಲ. ಇದಕ್ಕೆ ಪೋಷಕರೇ ಕಾರಣರಲ್ಲ. ನಮ್ಮಲ್ಲಿ ಇನ್ನೂ ಕ್ರೀಡಾ ಸಂಸ್ಕøತಿ ಬೆಳೆದಿಲ್ಲ. ಅದರಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಇದೆ. ಒಲಿಂಪಿಕ್ಸ್ ನಂತಹ ಕ್ರೀಡಾ ಉತ್ಸವದಲ್ಲಿ ಭಾಗವಹಿಸುವುದಕ್ಕೆ ಪಟುಗಳು ತಮ್ಮ ರಕ್ತ ಹೊಸೆದು ಅಭ್ಯಾಸ ಮಾಡುತ್ತಾರೆ. ಸವಾಲುಗಳ ನಡುವೆಯೇ ಸಾಮರ್ಥ್ಯ ಪ್ರದರ್ಶಿಸುತ್ತಾರೆ. ಒಂದುವೇಳೆ, ಸೋತರೆ ಅವರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಗೆದ್ದರಷ್ಟೇ ಮರ್ಯಾದೆ. ಅವರ ಕಷ್ಟ ಕರ್ಪಣ್ಯಗಳನ್ನು ಕೇಳುವ ಕಿವಿಗಳೇ ಇಲ್ಲ. ಇದು ಭಾರತೀಯ ಕ್ರೀಡಾ ಜಗತ್ತಿನ ಇನ್ನೊಂದು ಕರಾಳ ಮುಖ.
ವಿವಿಧ ಕ್ರೀಡೆಗಳಲ್ಲಿ ಸ್ಥಿತಿವಂತ ಕುಟುಂಬದ ಮಕ್ಕಳು ಪ್ರತಿನಿಧಿಸುತ್ತಾರೆಯೇ ಹೊರತು ದೈಹಿಕವಾಗಿ ಬಲಿಷ್ಠ ಮತ್ತು ಕ್ರೀಡೆಗೆ ಹೇಳಿ ಮಾಡಿಸಿದ ಗ್ರಾಮೀಣ ಪ್ರತಿಭೆಗಳಲ್ಲ. ಈ ಎಲ್ಲ ಅಂಶಗಳು ಪದಕಗಳ ಪಟ್ಟಿಯಲ್ಲಿ ಭಾರತ ಹಿಂದೆ ಬೀಳಲು ಪರೋಕ್ಷ ಕಾರಣಗಳಾಗಿವೆ.
ಲೇಖನ- ಶರಣ್ ಮುಷ್ಟೂರ್
https://www.suddikanaja.com/2020/11/18/indian-cricket-team-practice-match/