ಮನಕಲಕುವ ಕಥೆ ಹೇಳಿ ನಕಲಿ ಚಿನ್ನದ ನಾಣ್ಯ ನೀಡಿ₹2.5 ಲಕ್ಷ ವಂಚನೆ

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಎರಡೂವರೆ ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದ್ದು, ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಟಿಕೆರೆ ನಿವಾಸಿ ಡಾ.ಎಂ.ಶಿವಾಜಿರಾವ್ ಎಂಬುವವರು ಮೋಸ ಹೋಗಿದ್ದು, ಹುಬ್ಬಳ್ಳಿ ಮೂಲದವರೆಂದು ಹೇಳಿಕೊಂಡಿದ್ದ ಕುಮಾರ್ ಮತ್ತಿತರರು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾನವೀಯ ಕಥೆ ಹೇಳಿ ಮೋಸ

ಶಿವಾಜಿರಾವ್ ಅವರು ಆಕ್ಸಿ ಕೇರ್ ಮೆಡಿಕಲ್ ಹೋಮ್ ಕೇರ್ ಸರ್ವಿಸ್ ಮಾಲೀಕರಾಗಿದ್ದು, ಇವರ ಗ್ರಾಹಕನೆಂದು ಪರಿಚಯ ಮಾಡಿಕೊಂಡಿದ್ದ ಕುಮಾರ್ ಎಂಬಾತ ಮನೆಯ ಪಕ್ಕದಲ್ಲಿ ಯಜಮಾನರೊಬ್ಬರಿದ್ದು ಅವರ ಮಗಳ ಮದುವೆಗೆ ಹಣ ಹೊಂದಿಸಲಾಗುತ್ತಿಲ್ಲ. ಅವರ ಬಳಿ ಹಳೇ ಕಾಲದ ಚಿನ್ನದ ನಾಣ್ಯಗಳಿದ್ದು, ಅವುಗಳನ್ನು ಪಡೆದು 5 ಲಕ್ಷ ರೂ. ನೀಡುವಂತೆ ಮನವಿ ಮಾಡಿದ್ದಾನೆ. ಆದರೆ, ಶಿವಾಜಿರಾವ್ ಅವರು ತಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು ತಿಳಿಸಿದ್ದಾರೆ. ಆದರೂ ಬಿಡದ ವ್ಯಕ್ತಿಯು ಪದೇ ಪದೆ ಕರೆ ಮಾಡಿದ್ದಾನೆ.

FOLLOW US copyREAD | ಶಿವಮೊಗ್ಗದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಸು ಏರಿಕೆ

ಆರಂಭದಲ್ಲಿ ಅಸಲಿ ನಾಣ್ಯ ನೀಡಿ ಪುಸಲಾಯಿಸಿದ ವ್ಯಕ್ತಿ

ನವೆಂಬರ್ 1ರಂದು ಶಿಕಾರಿಪುರ ರಸ್ತೆಯ ಬೂದಿಗೆರೆಯಲ್ಲಿ ಕುಮಾರ್ ಎರಡು ಚಿನ್ನದ ನಾಣ್ಯಗಳನ್ನು ನೀಡಿದ್ದು, ಅವುಗಳನ್ನು ಪರೀಕ್ಷಿಸಿದಾಗ ಅಸಲಿ ಇರುವುದು ಖಚಿತವಾಗಿದೆ. ತದನಂತರ, ಫೋನ್ ಮಾಡಿ ಚಿನ್ನದ ನಾಣ್ಯ ಪಡೆದು ಹಣ ನೀಡುವಂತೆ ಕೇಳಿದ್ದಾನೆ. ಅಷ್ಟೊಂದು ಹಣವಿಲ್ಲ ಎಂದಿದ್ದಕ್ಕೆ ಎರಡೂವರೆಗೆ ಲಕ್ಷವಾದರೂ ನೀಡುವಂತೆ ಮನವಿ ಮಾಡಿದ್ದಾನೆ. ಅದರಂತೆ, ನವೆಂಬರ್ 9ರಂದು ಸವಳಂಗದ ಬಸವನಗಂಗೂರು ಕ್ರಾಸ್ ಬಳಿ ಕುಮಾರ ಬರುವಂತೆ ಸೂಚಿಸಿದ್ದಾನೆ. ಅದರಂತೆ, ಆಟೋದಲ್ಲಿ ಬಂದು ಹಣ ನೀಡಿದ್ದು, ಪರೀಕ್ಷಿಸುವುದಕ್ಕೂ ಅವಕಾಶ ನೀಡದೇ ಯಾರೂ ಇಲ್ಲಿಗೆ ಬರುವುದನ್ನು ಗಮನಿಸಿದ್ದಾರೆ ಎಂದು ಗಾಬರಿ ಹುಟ್ಟಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಆ ನಾಣ್ಯಗಳನ್ನು ಪರೀಕ್ಷಿಸಿದಾಗ ನಕಲಿ ಇರುವುದು ದೃಢಪಟ್ಟಿದೆ. ಮೋಸ ಹೋಗಿರುವುದಾಗಿ ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

https://www.suddikanaja.com/2021/10/09/unknown-person-frauded-woman/

error: Content is protected !!