Rameshwaram cafe blast | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್, ತೀರ್ಥಹಳ್ಳಿಯ ಮೋಸ್ಟ್ ವಾಂಟೆಡ್ ಆರೋಪಿಗಳು ಅರೆಸ್ಟ್, ಅವರ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ

NIA

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮೋಸ್ಟ್ ವಾಂಟೆಡ್ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ(National Investigation Agency- ಎನ್.ಐಎ) ಬಂಧಿಸಿದೆ. ಇವರ ಸುಳಿವು ನೀಡುವವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಇವರಿಬ್ಬರನ್ನು ಕಲ್ಕತ್ತಾದಲ್ಲಿ ಬಂಧಿಸಲಾಗಿದೆ.
ತೀರ್ಥಹಳ್ಳಿ ಮೂಲದ ಮುಸಾವೀರ್ ಹುಸೇನ್ ಶಾಜಿಬ್ (30), ಅಬ್ದುಲ್ ಮತೀನ್ ಅಹಮದ್ ತಾಹಾ (30) ಎಂಬುವವರನ್ನು ಬಂಧಿಸಲಾಗಿದೆ.

Crime logo
ಇದುವರೆಗೆ ಮೂವರ ಬಂಧನ
ಮಾ.1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram cafe)ಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಟ್ಟಿದ್ದ ಮುಸ್ಸಾವೀರ್, ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಮತೀನ್ ತಲೆ ಮರೆಸಿಕೊಂಡಿದ್ದರು. ಈ ಪ್ರಕರಣದಲ್ಲಿ ಬಾಂಬ್ ತಯಾರಿಕೆಗೆ ಉಪಕರಣಗಳನ್ನು ಒದಗಿಸಿದ್ದ ಚಿಕ್ಕಮಗಳೂರು ಜಿಲ್ಲೆ ಕಳಸ ಮೂಲದ ಮುಜಾಮಿಲ್ ಷರೀಫ್ ನನ್ನು ಬಂಧಿಸಲಾಗಿತ್ತು. ಇದುವರೆಗೆ ಈ ಪ್ರಕರಣದಲ್ಲಿ ಒಟ್ಟು ಮೂವರನ್ನು ಬಂಧಿಸಿದಂತಾಗಿದೆ.
ಕಲ್ಕತ್ತಾ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿರುವ ಎನ್.ಐ.ಎ ಪೊಲೀಸರು ತಲೆಮರೆಸಿಕೊಂಡಿದ್ದ ಮುಸ್ಸಾವೀರ್ ಮತ್ತು ಮತೀನ್ ನನ್ನು ಬಂಧಿಸಿದ್ದಾರೆ. ನಂತರ ಕಲ್ಕತ್ತಾದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಮತೀನ್, ಮಸ್ಸಾವೀರ್ 2020ರ ಬಳಿಕ ಐಸೀಸ್ ನಂಟು
ತೀರ್ಥಹಳ್ಳಿ ತಾಲೂಕಿನ ಮತೀನ್ ಇಂಜಿನಿಯರಿಂಗ್ ಪದವೀಧರ. ಮುಸ್ಸಾವೀರ್ ಈತನ ಸ್ನೇಹಿತ. ಇವರು ಅಲ್ ಹಿಂದ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 2020ರ ಬಳಿಕ ಐಸಿಸ್ ನಂಟು ಹೊಂದಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ.
“ಮತೀನ್ ಜಿಹಾದಿ ತತ್ವಕ್ಕೆ ಮಾರುಹೋಗಿದ್ದ. ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ಕರ್ನಾಟಕದಲ್ಲಿ ಭಾರೀ ಸ್ಫೋಟದ ಹೊಂಚು ರೂಪಿಸಲಾಗುತ್ತಿತ್ತು. ಅದಕ್ಕಾಗಿ ಸ್ನೇಹಿತರು, ಪರಿಚಯಸ್ಥರನ್ನು ಐಸಿಸ್ ಗೆ ಸೇರಿಸುತ್ತಿದ್ದ” ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಅದರ ಭಾಗವೇ ರಾಮೇಶ್ವರಂ ಬಾಂಬ್ ಸ್ಫೋಟ ಎನ್ನಲಾಗುತ್ತಿದೆ.

READ | ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್, ತೀರ್ಥಹಳ್ಳಿ ಯುವಕ ಅರೆಸ್ಟ್, ಏನೆಲ್ಲ ಆರೋಪಗಳಿವೆ?

ಮುಸ್ಸಾವೀರ್, ಮತೀನ್, ಷರೀಫ್ ಬಗ್ಗೆ ಒಂದಿಷ್ಟು ಮಾಹಿತಿ

  • ಮುಸಾವೀರ್ ಹುಸೇನ್ ಶಾಜಿಬ್
    ತೀರ್ಥಹಳ್ಳಿ ಮೂಲದ ಮುಸಾವೀರ್ ಹುಸೇನ್ ಶಾಜಿಬ್ ಅಲಿಯಾಸ್ ಮೊಗಮ್ಮದ್ ಜುನೈದ್ ಸೈಯದ್ (30) ಅಲ್ ಹಿಂದ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತ ಮತೀನ್ ಆಪ್ತ ಸ್ನೇಹಿತ. ಐಸಿಸ್ ಚಟುವಟಿಕೆಗಳಲ್ಲಿ ಸಕ್ರಿಯ. ಮತೀನ್ ಸೂಚನೆ ಮೇರೆಗೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ.
  • ಅಬ್ದುಲ್ ಮತೀನ್ ಅಹಮದ್ ತಾಹಾ
    ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್ ಅಹಮದ್ ತಾಹಾ (30) ಅಲಿಯಾಸ್ ಡಿ.ವಿಘ್ನೇಶ್ ಅಲಿಯಾಸ್ ಸುಮೀತ್ ಸೇರಿದಂತೆ ಸಾಕಷ್ಟು ಹಿಂದು ಧರ್ಮೀಯರ ಹೆಸರುಗಳನ್ನು ಹೊಂದಿರುವ ಶಂಕೆ ಇದೆ. ಈತ ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ. ಜಿಹಾದಿ ತತ್ವಗಳಿಂದ ಸೆಳೆತಕ್ಕೆ ಒಳಗಾಗಿದ್ದು, ಅಲ್ ಹಿಂದ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. 2020ರಲ್ಲಿ ಅಲ್ ಹಿಂದ್ ಸಂಘಟನೆ ಸದಸ್ಯರ ಬಂಧನದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ. ಕಳೆದ ನಾಲ್ಕು ವರ್ಷಗಳಿಂದ ನಿಗೂಢವಾಗಿ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಎಂಬ ಆರೋಪವಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮದ್ ಶಾರೀಕ್, ಶಿವಮೊಗ್ಗ ಐಸಿಸ್ ಮಾಡ್ಯೂಲ್ ನ ಆರೋಪಿ ಮುನೀರ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ.
  • ಮುಜಾಮಿಲ್ ಷರೀಫ್
    ಚಿಕ್ಕಮಗಳೂರು ಜಿಲ್ಲೆ ಕಳಸ ಮೂಲದ ಮುಜಾಮಿಲ್ ಷರೀಫ್ ಬಂಧಿತ. ಈತನು ಹೆಚ್ಚು ವಿದ್ಯಾಭ್ಯಾಸ ಹೊಂದಿಲ್ಲ. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಮತೀನ್ ಸಂಪರ್ಕಕ್ಕೆ ಸಿಕ್ಕ ಬಳಿಕ ಉಗ್ರ ಸಂಘಟನೆಗಳಲ್ಲಿ ಸಕ್ರಿಯ.

error: Content is protected !!