ಶಿವಮೊಗ್ಗದ ಸಕ್ರೆಬೈಲು ಆನೆಗಳಿಗೆ ಉತ್ತರ ಪ್ರದೇಶದಿಂದ ಡಿಮ್ಯಾಂಡ್, ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದ ಯುಪಿ

 

 

ಸುದ್ದಿ ಕಣಜ.ಕಾಂ | KARNATAKA | WILD LIFE
ಶಿವಮೊಗ್ಗ: ಉತ್ತರ ಪ್ರದೇಶಕ್ಕೆ ಕರ್ನಾಟಕದಿಂದ ಎರಡು ಆನೆಗಳನ್ನು ಕಳುಹಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಉತ್ತರ ಪ್ರದೇಶ ಸರ್ಕಾರ ಪತ್ರ ಬರೆದಿದೆ.

ಈಗಾಗಲೇ ಉತ್ತರ ಪ್ರದೇಶ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಕ್ರೆಬೈಲು ಆನೆಬಿಡಾರಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವ ಆನೆಗಳನ್ನು ಕಳುಹಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಒಂದುವೇಳೆ, ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದರೆ ಯಾವ ಆನೆಗಳನ್ನು ಕಳುಹಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ಕಣಜ.ಕಾಂ ಗೆ ತಿಳಿಸಿದ್ದಾರೆ.

ಕ್ಯಾಂಪ್ ನ ಗಂಡು, ಹೆಣ್ಣಾಗೆ ಬೇಡಿಕೆ
ಉತ್ತರ ಪ್ರದೇಶದಿಂದ ಒಂದು ಗಂಡು ಹಾಗೂ ಒಂದು ಹೆಣ್ಣಾನೆಯನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ. ಪ್ರಸಕ್ತ ಸಕ್ರೆಬೈಲಿನಲ್ಲಿ ಒಟ್ಟು 23 ಆನೆಗಳಿವೆ. ಅದರಲ್ಲಿ ಯಾವುದನ್ನು ಕಳುಹಿಸಿಕೊಡಬೇಕು ಎನ್ನುವುದು ರಾಜ್ಯ ಸರ್ಕಾರದ ಹಸಿರು ನಿಶಾನೆ ನಂತರವೇ ತೀರ್ಮಾನಿಸಲಾಗುವುದು.
ಆನೆಗಳ ಆಯ್ಕೆ ಹೇಗೆ ನಡೆಯಲಿದೆ?
ಯುಪಿಗೆ ಆನೆಗಳನ್ನು ಕಳುಹಿಸಬೇಕಾದರೆ ಅದಕ್ಕೂ ಮುನ್ನ ಆನೆಗಳ ದೈಹಿಕ ಸದೃಢತೆ, ಕಾರ್ಯಕ್ಷಮತೆ, ವಯಸ್ಸು, ತರಬೇತಿ ಗುಣಮಟ್ಟ, ಮಾನವರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಇತ್ಯಾದಿ ಅಂಶಗಳ ಆಧಾರದ ಮೇಲೆ ಯಾವ ಆನೆಗಳನ್ನು ಕಳುಹಿಸಬೇಕು ಎನ್ನುವುದನ್ನು ನಿರ್ಣಯಿಸಲಾಗುತ್ತದೆ.

2018ರಲ್ಲೂ ಯುಪಿಗೆ ಕಳುಹಿಸಲಾಗಿತ್ತು ಆನೆ

ಸಕ್ರೆಬೈಲು ಆನೆಬಿಡಾರದಿಂದ 2018ರಲ್ಲೂ ನಾಲ್ಕು ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲಾಗಿತ್ತು. ಸಕ್ರೆಬೈಲಿನಲ್ಲಿ ಆನೆಗಳ ಸಂತಾನೋತ್ಪತ್ತಿ ಉತ್ತಮವಾಗಿದ್ದು, ಕಳುಹಿಸಿಕೊಡುವುದಕ್ಕೆ ಯಾವುದೇ ತೊಂದರೆಗಳಿಲ್ಲ.

https://www.suddikanaja.com/2021/02/06/elephant-returned-its-territory/

error: Content is protected !!