ಸುದ್ದಿ ಕಣಜ.ಕಾಂ | DISTRICT | MAARI JATRE
ಶಿವಮೊಗ್ಗ: ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದೇ ತಿಂಗಳ 22ರಿಂದ 26ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಯಲಿದೆ ಎಂದು ಶ್ರೀ ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ರಾ ಮಹೋತ್ಸವದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದ್ದಾರೆ.

READ | ಸತತ ಮೂರನೇ ದಿನ ಬಂಗಾರ, ಬೆಳ್ಳಿಯ ಬೆಲೆ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್
ಯಾವ ದಿನ ಯಾವ ಕಾರ್ಯಕ್ರಮಗಳು ನಡೆಯಲಿವೆ?
- ಮಾರ್ಚ್ 22ರಂದು ಗಾಂಧಿ ಬಜಾರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಶ್ರೀ ಅಮ್ಮನವರಿಗೆ ವಿಶೇಷ ಪೂಜೆ ಆರಂಭವಾಗುತ್ತದೆ. ಅಂದು ಬ್ರಾಹ್ಮಣ ನಾಡಿಗ ಕುಟುಂಬದ ಮನೆಗೆ ಹೋಗಿ ವೀಳ್ಯ ಕೊಟ್ಟು ಮಂಗಳವಾದ್ಯದೊಂದಿಗೆ ಪೂಜಿಸಲಾಗುತ್ತದೆ. ನಂತರ ಕುಂಬಾರ ಜನಾಂಗದವರಿಂದ ಬಾಸಿಂಗದ ಜೊತೆ ಕರೆತರಲಾಗುವುದು. ಬ್ರಾಹ್ಮಣರು ದೇವಿಗೆ ಉಡಿ ತುಂಬಿ ಪೂಜಿಸುವರು. ನಂತರ ವಿಶ್ವಕರ್ಮ ಜನಾಂಗದವರಿಂದ ಇಡೀ ದಿನ ಪೂಜೆ ನೆರವೇರಲಿದೆ. ದೇವಿಯ ದರ್ಶನಕ್ಕೆ ಅಲ್ಲಿ ಭಕ್ತರಿಗೆ ಅನುವು ಮಾಡಿಕೊಡಲಾಗುವುದು. ರಾತ್ರಿ ಸುಮಾರು 9 ಗಂಟೆಗೆ ಉಪ್ಪಾರ ಕುಲದವರು ದೇವಿಯನ್ನು ಕೋಟೆ ಶ್ರೀ ಮಾರಿಕಾಂಬ ದೇವಾಲಯದ ಗದ್ದುಗೆಗೆ ಕರೆತರುತ್ತಾರೆ. ಇದರ ಮಧ್ಯೆ ಗಂಗಾಮತಸ್ಥ ಸಮಾಜದವರು ಗಟೇವುನೊಂದಿಗೆ ಗಾಂಧಿ ಬಜಾರ್ ನಲ್ಲಿ ದೇವರಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ. ಗದ್ದುಗೆ ಬಳಿ ದೇವಿ ಬಂದಾಗ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಬಾಂಧವರು ಪೂಜೆ ಸಲ್ಲಿಸುತ್ತಾರೆ. ಗದ್ದುಗೆಯಲ್ಲಿ ದೇವಿ ಕೂರಿಸುತ್ತಿದ್ದಂತೆ ಕುರುಬ ಸಮಾಜದ ಚೌಡಿಕೆ ಮನೆತನದವರು ದೇವಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸುತ್ತಾರೆ.
- ಮಾ.23ರ ಬೆಳಗ್ಗೆ 6.30ರಿಂದ ಇಡೀ ದಿನ ವಾಲ್ಮೀಕಿ, ಉಪ್ಪಾರರು, ಮಡಿವಾಳರು ಸೇರಿದಂತೆ ನಾಲ್ಕು ದಿನಗಳ ಕಾಲ ಅಮ್ಮನವರಿಗೆ ಸರತಿಯಂತೆ ಪೂಜೆ ಸಲ್ಲಿಸುತ್ತಾರೆ. ದೇವರ ದರ್ಶನಕ್ಕೆ ಬರುವವರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಭಾರೀ ಜನ ಪಾಲ್ಗೊಳ್ಳುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಾತ್ರೆಯ ಯಶಸ್ವಿಗಾಗಿ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಜಾತ್ರೆಯ ಯಶಸ್ವಿಗಾಗಿ ಸಹಕಾರ ನೀಡಲಿವೆ.
- ಮಾ.24 ಮತ್ತು 25ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.22ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಹರಕೆ, ಪೂಜೆ ಹಾಗೂ ಪ್ರಸಾದ ವಿನಿಯೋಗವಿರುತ್ತದೆ. ಕೋಟೆ ಶ್ರೀ ಮಾರಿಕಾಂಬ ಮಹೋತ್ಸವದ ಅಂಗವಾಗಿ ಮಾ.11ರಂದು ದೇವಾಲಯದ ಆವರಣದಲ್ಲಿ ಚಪ್ಪರ ಪೂಜೆ ನೆರವೇರಿಸಲಾಗಿದೆ.
ಈ ಬಾರಿ ಜಾತ್ರೆಗಾಗಿ ಯಾರಿಂದಲೂ ಚಂದಾ ಸಂಗ್ರಹಿಸುತ್ತಿಲ್ಲ. ದಾನಿಗಳೇ ದಿನಸಿ ಸಾಮಾನು, ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು
ನೀಡುತ್ತಿದ್ದಾರೆ. ಪಾಲಿಕೆ ವತಿಯಿಂದ ₹10 ಲಕ್ಷ ನೀಡಲಾಗಿದೆ. ಇತರೆ ಸಂಘ-ಸಂಸ್ಥೆಗಳು ಸಹ ಧನ ಸಹಾಯ ಮಾಡುತ್ತಿವೆ ಎಂದರು.
ಪ್ರತಿ ಬಾರಿಯೂ ಫೆಬ್ರವರಿ ತಿಂಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಕೊರೊನಾ ಹಿನ್ನೆಲೆ ಜಿಲ್ಲಾಡಳಿತದ ಆದೇಶದ ಮೇರೆಗೆ ಜಾತ್ರೆಯನ್ನು ಮುಂದೂಡಲಾಗಿತ್ತು.
READ | ಶಿವಮೊಗ್ಗ-ಭದ್ರಾವತಿ ರಸ್ತೆ ಬಂದ್, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ಈ ಸಲ ಕುಸ್ತಿ, ಹೆಲಿ ಟೂರಿಸಂ ಇರಲ್ಲ
ಈ ಸಲದ ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಮತ್ತು ಹೆಲಿ ಟೂರಿಸಂ ಇರುವುದಿಲ್ಲ. ಜೊತೆಗೆ, ಅಮ್ಮನವರ ಮೂರ್ತಿಗೆ ಬೆಳ್ಳಿ ಪಾದುಕೆ, ಸೊಂಟಕ್ಕೆ ಪಟ್ಟಿ ಹಾಗೂ ಎರಡು ಸೀರೆ ಧಾರಣೆ ಮಾಡಲಾಗುವುದು. ಅಮ್ಮನವರ ಮೂರ್ತಿಗೆ ಖ್ಯಾತ ಶಿಲ್ಪಿ ಕಾಶಿನಾಥ್ ಅವರು ಅಲಂಕಾರ ಮಾಡುವರು. ದೇವಾಲಯದ ಸುತ್ತ ಈ ಬಾರಿ ಯಾವುದೇ ಸ್ಟಾಲ್ ಗಳನ್ನು ತೆರೆಯಲು ಅವಕಾಶವಿಲ್ಲ. ಬದಲಿಗೆ ದೂರದಲ್ಲಿ ತೆರೆಯಬಹುದು. ಐದು ದಿನಗಳ ಕಾಲವೂ ಊಟ, ಉಪಾಹಾರ, ರಾತ್ರಿ ಊಟದ ವ್ಯವಸ್ಥೆ ಇರಲಿದೆ.
ರಾಜಬೀದಿ ಉತ್ಸವ
ಮಾರ್ಚ್ 26ರಂದು ರಾಜಬೀಧಿ ಉತ್ಸವ ರಾತ್ರಿ 8 ಗಂಟೆಗೆ ನಡೆಯಲಿದೆ. ಗಾಂಧಿ ಬಜಾರ್, ಬಿ.ಎಚ್. ರಸ್ತೆ ಮೂಲಕ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ದಾಟಿ ಅಲ್ಲಿರುವ ಅರಣ್ಯದಲ್ಲಿ ಅಮ್ಮನವರ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಜಾತ್ರೆಯನ್ನು
ಸಂಪನ್ನಗೊಳಿಸಲಾಗುವುದು ಎಂದರು.
ಕೋಟೆ ಮಾರಿಕಾಂಬ ಸೇವಾ ಸಮಿತಿಯ ಉಪಾಧ್ಯಕ್ಷ ಉಮಾಪತಿ
ಪ್ರಮುಖರಾದ ಶಂಕರ್ ಗನ್ನಿ, ಎಂ.ಕೆ. ಸುರೇಶ್‌ಕುಮಾರ್, ಎಸ್.ಸಿ. ಲೋಕೇಶ್, ಎಸ್.ಹನುಮಂತಪ್ಪ, ಟಿ.ಎಸ್. ಚಂದ್ರಶೇಖರ್, ಎಸ್.ಜಿ. ಪ್ರಭಾಕರ ಗೌಡ, ಎನ್. ಶ್ರೀಧರಮೂರ್ತಿ ನವುಲೆ, ಸುನೀಲ್, ಪ್ರಕಾಶ್ ಉಪಸ್ಥಿತಿತರಿದ್ದರು.