ಶಿವಮೊಗ್ಗದಲ್ಲಿ‌ ಇನ್ಮುಂದೆ‌ ಮರಳು‌ ಬಳಕೆ‌ ಮೇಲೆ ಹದ್ದಿನ ಕಣ್ಣು

ಸುದ್ದಿ ಕಣಜ.ಕಾಂ | DISTRICT | SC, ST MEETING
ಶಿವಮೊಗ್ಗ: ಭೂವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪ್ರತಿ ತಿಂಗಳು ಮರಳು ಬಳಕೆ ಮಾಡಿದ ಇಲಾಖೆಗಳಿಂದ ವರದಿ ಪಡೆದು ನೀಡುವಂತೆ ಹಾಗೂ ಸಿಸಿ ಟಿವಿ ಫೂಟೇಜ್ ನೀಡಬೇಕು. ಇಲ್ಲವಾದರೆ, ಅಧಿಕಾರಿಗೆ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯಲ್ಲಿ ಸರ್ಕಾರದ ಮರಳು ಕ್ವಾರೆಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸುವುದನ್ನು ತಡೆಯುವಂತೆ ಸದಸ್ಯ ಜಗದೀಶ್ ಕೋರಿದ್ದಕ್ಕೆ‌ ಅವರು ಪ್ರತಿಕ್ರಿಯೆ ನೀಡಿದರು.

2022 ನೇ ಸಾಲಿನಲ್ಲಿ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ಒಟ್ಟು 41 ಪ್ರಕರಣ ದಾಖಲಾಗಿದ್ದು, 27 ಪ್ರಕರಣಗಳಿಗೆ ಪರಿಹಾರ ಮಂಜೂರು ಮಾಡಲಾಗಿದೆ. 6 ಪ್ರಕರಣ ಬಾಕಿ ಇದ್ದು, ಸುಳ್ಳು ಜಾತಿ 8 ಪ್ರಕರಣಗಳಾಗಿವೆ. ಒಟ್ಟು ₹82 ಲಕ್ಷ ಪರಿಹಾರ ನೀಡಲಾಗಿದೆ
ನಾಗರಾಜ್, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ಸೂಚಿಸಿದರು.
ಸಮಿತಿ ಸದಸ್ಯ ಜಗದೀಶ್ ಮಾತನಾಡಿ, ಶಿವಮೊಗ್ಗ ಸುತ್ತಮುತ್ತ ಗ್ರಾಮಗಳು ಉದಾಹರಣೆಗೆ ಹಸೂಡಿಯಂತಹ ಗ್ರಾಮಗಳು ನಗರಕ್ಕೆ ಹತ್ತಿರವಿದ್ದರೂ ಜನರು ಸೌಲಭ್ಯ ವಂಚಿತರಾಗಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‍ಸಿ, ಎಸ್‍ಟಿ, ತಮಿಳು ಇತರೆ ಹಿಂದುಳಿದ ಜನಾಂಗದವರಿದ್ದು ನಿರ್ಗತಿಕರಾಗಿದ್ದಾರೆ. ಇಂತಹ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಳ್ಳಿಗಳಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿ ನೀಡಿ, ದಿನಾಂಕ ನಿಗದಿಪಡಿಸಿ ಅರ್ಧ ದಿನ ಬಂದು ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

READ | ‘ವಿಂಡೋಸೀಟ್’ ರಿಲೀಸಿಂಗ್ ಡೇಟ್ ಫಿಕ್ಸ್, ಕಥಾ ಹಂದರ ಬಿಚ್ಚಿಟ್ಟ ಶಿವಮೊಗ್ಗದವರೇ ಆದ ಶೀತಲ್ ಶೆಟ್ಟಿ

ಜಿಲ್ಲಾಧಿಕಾರಿ ನೀಡಿದ ಸೂಚನೆಗಳಿವು
1. ಶಿಕಾರಿಪುರ ತಾಲ್ಲೂಕಿನ ಉಡುಗಣಿ ಗ್ರಾಮದ ಸರ್ವೇ ನಂ. 43 ಬ್ಲಾಕ್ ಫಲಾನುಭವಿಯೋರ್ವರ 5 ವರ್ಷದ 20 ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆಯವರು ಸರ್ವೇ ಕಾರ್ಯ ಮಾಡಿ ಕಡಿದು ಹಾಕಿದ್ದು, ಇವರಿಗೆ ಸೂಕ್ತ ಪರಿಹಾರ ನೀಡುವಂತೆ ಅವರು ಕೋರಿದರು. ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯವರು ಫಲಾನುಭವಿಯನ್ನು ಕರೆಯಿಸಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು.
2. ಕಟ್ಟಡ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭೋವಿ ಜನಾಂಗದವರಿಗೆ ಕಾರ್ಮಿಕ ಕಾರ್ಡ್ ಹಾಗೂ ಇತರೆ ಸೌಲಭ್ಯಗಳು ಕಾರ್ಮಿಕ ಇಲಾಖೆಯಿಂದ ಸಿಗುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯೆ ನೀಡಿದ ಡಿಸಿ, ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಒಂದು ಶಿಬಿರ ಏರ್ಪಡಿಸಿ ಅರ್ಹರಿಗೆ ಕಾರ್ಡ್ ನೀಡುವಂತೆ ಸೂಚಿಸಿದರು.
3. ಸಂತೇಕಡೂರು, ಸೋಗಾನೆ, ಮತ್ತೂರು ಪ್ರದೇಶದಲ್ಲಿ ಬಲಿಷ್ಟ ವ್ಯಕ್ತಿಗಳು ಸರ್ಕಾರಿ ಭೂಮಿ ಖರೀದಿಸಿ, ಮಾರಾಟ ಮಾಡುವ ಮಾಫಿಯಾ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂಬ ದೂರಿಗೆ ಭೂಮಿ ಖರೀದಿ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.
4. ಸಮಿತಿ ಸದಸ್ಯರಾದ ಬಸವರಾಜ ಹಸ್ವಿ ಮಾತನಾಡಿ, ಸೊರಬ ತಾಲ್ಲೂಕಿನ ಗ್ರಾಮವೊಂದರಲ್ಲೇ 16 ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಕೂಡಲೇ ಕ್ರಮ ವಹಿಸಬೇಕು ಹಾಗೂ ಇನ್ನೊಂದು ಗ್ರಾಮದಲ್ಲಿ ಭೂ ಮಾಲೀಕ ಗೇಣಿದಾರನನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಓ ಎಂ.ಎಲ್.ವೈಶಾಲಿ, ಸಾಗರ ಉಪ ವಿಭಾಗದ ತಹಸೀಲ್ದಾರ್ ನಾಗರಾಜ್, ಶಿವಮೊಗ್ಗ ತಹಸೀಲ್ದಾರ್ ಡಾ.ನಾಗರಾಜ್, ಅರಣ್ಯ ಇಲಾಖೆ, ಅಬಕಾರಿ, ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮರಳು ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್, ದಾಖಲಾದ ಪ್ರಕರಣಗಳೆಷ್ಟು ಗೊತ್ತಾ?

Leave a Reply

Your email address will not be published.