ಸುದ್ದಿ ಕಣಜ.ಕಾಂ | DISTRICT | 26 AUG 2022
ಶಿವಮೊಗ್ಗ: ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಗೌರವಾಧ್ಯಕ್ಷರಾದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಪಂಚಮಸಾಲಿ ಮಹಾಸಭಾ ಧರ್ಮಕ್ಷೇತ್ರ ಕೂಡಲಸಂಗಮ ಜಿಲ್ಲಾ ಘಟಕ ವತಿಯಿಂದ ಲಿಂಗಾಯತ ಪಂಚಮಸಾಲಿ, ಲಿಂಗಾಯತ ಮಲೆಗೌಡ ಸಮುದಾಯವನ್ನು ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
READ | ಶಿವಮೊಗ್ಗದಲ್ಲಿ ಗಣೇಶ ಹಬ್ಬ ಹಿನ್ನೆಲೆ ಇಬ್ಬರಿಗೆ ಗಡಿಪಾರು, ಕಾರಣವೇನು?
ಗೋಪಿ ವೃತ್ತದವರೆಗೆ ಪಾದಯಾತ್ರೆ
ನಗರದ ಶಿವಪ್ಪನಾಯಕ ವೃತ್ತದಲ್ಲಿ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯ ಮೂಲಕ ಪಂಚಮಸಾಲಿ ಸಮಾಜದ ಬಾಂಧವರೊಂದಿಗೆ ಗೋಪಿವೃತ್ತದವರೆಗೆ ಪಾದಯಾತ್ರೆ ನಡೆಸಿ, ನಂತರ ಬಹಿರಂಗ ಸಭೆ ನಡೆಸಲಾಯಿತು.
ಸರ್ಕಾರ ನೀಡಿದ ಗಡುವು ಮುಗಿದಿದೆ
ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ರಾಜ್ಯದಾದ್ಯಂತ ನಿರಂತರವಾಗಿ ಲಿಂಗಾಯತ ಪಂಚಮ ಸಾಲಿ, ಮಲೆಗೌಡ ಲಿಂಗಾಯತ ಸಮುದಾಯವನ್ನು ರಾಜ್ಯ ಸರ್ಕಾರದ 2ಎ ಮೀಸಲಾತಿಗೆ ಒಳಪಡಿಸಬೇಕು. ಎಲ್ಲ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಹಕ್ಕೊತ್ತಾಯ ದಿಂದ ಮೀಸಲಾತಿ ಚಳವಳಿ ನಡೆಸಲಾಗುತ್ತಿದೆ. ಈಗಾಗಲೇ 10 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ನಿರಂತರ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ಮಾಡುವುದು, ರಾಜ್ಯದಾದ್ಯಂತ ಹರಿದು ಹಂಚಿ ಹೋಗಿರುವ ಪಂಚಮಸಾಲಿ ಸಮುದಾಯ ವನ್ನು ಒಗ್ಗೂಡಿಸುವುದು, ಇದರೆ ಲ್ಲದರ ನಡುವೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಹೋರಾಟ ನಡೆಸಲಾಗುತ್ತಿದೆ. ಆದರೆ ಸರ್ಕಾರ ನೀಡಿದ್ದ ಗಡುವು ಮುಗಿದಿದೆ ಎಂದು ಹೇಳಿದರು.
ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜದ ಆಶೀರ್ವಾದ ಕಳೆದುಕೊಳ್ಳಲಿದೆ.
| ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿ ಭರವಸೆ ನೀಡಿದ್ದರು. ನಂತರ ಸಿಎಂ ಆದ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೂ ಮೂರು ಸಲ ಭರವಸೆ ನೀಡಿದ್ದು, ಕಾರ್ಯಾನುಷ್ಠಾನ ಮಾತ್ರ ಆಗಿಲ್ಲ ಎಂದು ಆರೋಪಿಸಿದರು.
READ | ಶಿವಮೊಗ್ಗದ ಹಲವೆಡೆ ಪೊಲೀಸರ ದಿಢೀರ್ ದಾಳಿ, ಕಾರಣವೇನು?
ಈಗಾಗಲೇ ರಾಜ್ಯದ ಹಲವೆಡೆ ಸಮೀಕ್ಷೆ ನಡೆಸಲಾಗುತ್ತಿದೆ. ಅದರ ವರದಿ ಬರುವ ಮುನ್ನ ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಜಾಗೃತಿ ಸಭೆಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕಾರ್ಯ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಬಹಿರಂಗ ಸಭೆ ನಡೆಸಲಾಗಿದೆ. ಸಂಸದರ ಮೂಲಕ ಜ್ಞಾಪನಾ ಪತ್ರವನ್ನು ಕೂಡ ನೀಡಲಾಗಿದೆ. ಸರ್ಕಾರ ಕೂಡಲೇ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ಮೀಸಲಾತಿಯನ್ನು ನೀಡಬೇಕು. ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಸೆಪ್ಟೆಂಬರ್ 26ರಂದು ಶಿಗ್ಗಾಂವಿಯ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಆಗ ಕೂಡ ಸರ್ಕಾರ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 23ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಸುಮಾರು 25 ಲಕ್ಷ ಪಂಚಮಸಾಲಿ ಬಾಂಧವರೊಂದಿಗೆ ‘ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ’ ಎಂಬ ಘೋಷಣೆಯೊಂದಿಗೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿದರು. ಸಮಾಜದ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಪ್ರೊ. ವಿಜಯಕುಮಾರ್, ರುದ್ರೇಗೌಡ ಕಡೆಮನೆ, ಎಂ.ಎಸ್.ಕುಮಾರ್, ಎಂ.ಪಿ.ವಿಜಯ್‌ಕುಮಾರ್, ನವೀನ್, ಲಿಂಗಪ್ಪಣ್ಣ ಕೆಳಗೇರಿ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
https://suddikanaja.com/2021/09/03/demand-fr-lingayat-community/