
ಸುದ್ದಿ ಕಣಜ.ಕಾಂ | DISTRICT | CITIZEN VOICE
ಶಿವಮೊಗ್ಗ: ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ನಿರಂತರ ನಡೆಯುತ್ತಿದ್ದು, ಕಸ ಸಾಗಿಸುವ ವಾಹನ ಚಾಲಕರು, ಹೆಲ್ಪರ್ಸ್, ಲೋಡರ್ಸ್, ಒಳಚರಂಡಿ ಕಾರ್ಮಿಕರು, ನೇರ ಪಾವತಿ ಕಾರ್ಮಿಕರು ಕಾರ್ಯನಿರ್ವಹಿಸದೇ ಇರುವುದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಬಡಾವಣೆಗಳು ಗಬ್ಬು ನಾರುತ್ತಿವೆ.
ದಿನ ಬೆಳಗಾದರೆ ಚೊಕ್ಕಾಗಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದ ಕಾರ್ಮಿಕರೇ ಪ್ರತಿಭಟನೆ ನಡೆಸುತ್ತಿರುವುದರಿಂದ ಪ್ರಮುಖ ರಸ್ತೆಗಳು ಅಕ್ಷರಶಃ ಕಸದ ಗುಂಡಿಗಳಾಗಿ ಮಾರ್ಪಟ್ಟಿವೆ. ಸ್ಮಾರ್ಟ್ ಸಿಟಿಯಲ್ಲಿ ತ್ಯಾಜ್ಯದ ರಾಶಿ ಕಣ್ಣಿಗೆ ಕುಕ್ಕುತ್ತಿದೆ. ಸಾರ್ವಜನಿಕ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

READ | ‘ಬೆಂಕಿ’ ಗುಟ್ಟು ಬಿಚ್ಚಿಟ್ಟ ನಟ ಅನೀಶ್ ತೇಜೇಶ್ವರ್, ಯಾವಾಗ ರಿಲೀಸ್?
ಎಲ್ಲೆಲ್ಲೂ ಕಸದ ರಾಶಿ
ನಗರ ನೆಹರೂ ರಸ್ತೆ, ಬಿ.ಎಚ್.ರಸ್ತೆ, ನೂರಡಿ ರಸ್ತೆ ಸೇರಿದಂತೆ ಎಲ್ಲ ಬಡಾವಣೆಗಳ ಕನ್ಸರ್ ವೆನ್ಸಿಗಳಲ್ಲಿ ಕಸದ ರಾಶಿ ಗುಡ್ಡೆ ಬಿದ್ದಿದೆ. ಅದನ್ನು ಯಾರೂ ಸಾಗಿಸಲು ಸಿದ್ಧರಿಲ್ಲ. ಮಹಾನಗರ ಪಾಲಿಕೆ ಪರ್ಯಾಯ ಕಾರ್ಮಿಕರನ್ನು ಬಳಸಿಕೊಂಡು ಕಸದ ವಿಲೇಗೆ ವ್ಯವಸ್ಥೆ ಮಾಡುವುದಾಗಿ ಹೇಳಿತ್ತು. ಆದರೆ, ಅಂತಹದ್ದೇನೂ ಆಗಿಯೇ ಇಲ್ಲ.
ನಿತ್ಯ ಬೆಳಗ್ಗೆ ಮನೆ ಮನೆಗೆ ಆಗಮಿಸುತ್ತಿದ್ದ ಕಸದ ಗಾಡಿಗಳು ಬರುತ್ತಿಲ್ಲ. ಮನೆಗಳಲ್ಲಿ ಸಂಗ್ರಹವಾಗಿರುವ ಕಸವನ್ನು ಜನರು ತಮ್ಮ ಮನೆಗಳಲ್ಲಿಯೇ ಇಟ್ಟುಕೊಂಡು ಕೊನೆಗೆ ಬೀದಿಯಲ್ಲಿ ತಂದು ಬಿಸಾಡುತ್ತಿದ್ದಾರೆ. ಹೀಗಾಗಿ, ಇಡೀ ನಗರದಲ್ಲಿ ಅನಾರೋಗ್ಯ ಸ್ಥಿತಿ ಸೃಷ್ಟಿಯಾಗಿದೆ. ಅದರಲ್ಲೂ ಮಳೆ ಸುರಿಯುತ್ತಿರುವುದರಿಂದ ಇನ್ನಷ್ಟು ಗಬ್ಬು ನಾರುತ್ತಿದೆ. ಕೂಡಲೇ ಮಹಾನಗರ ಪಾಲಿಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೌರಕಾರ್ಮಿಕರ ಬೇಡಿಕೆಗಳೇನು?
ಈ ಪ್ರತಿಭಟನೆ ಶಿವಮೊಗ್ಗ ನಗರಕ್ಕಷ್ಟೇ ಸೀಮಿತವಾಗಿಲ್ಲ . ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲೂ ಪೌರಕಾರ್ಮಿಕರು ಆಡಳಿತ ತಮ್ಮ ದನಿಗೆ ಕಿವಿಗೊಡುತ್ತಿಲ್ಲ ಎಂದು ಮುನಿಸಿಕೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿ ಕುಳಿತಿದ್ದಾರೆ.
ಸೇವೆ ಕಾಯಂ, ಮಹಿಳಾ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ, ಹೆರಿಗೆ ಭತ್ಯೆ, ಗೃಹ ಭಾಗ್ಯ ಯೋಜನೆ ಸಏರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ. ನಗರದ ಸ್ವತಂತ್ರ ಉದ್ಯಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಧರಣಿ ಕುಳಿತಿದ್ದಾರೆ.
ಕಣ್ಮುಚ್ಚಿ ಕುಳಿತ ಆಡಳಿತ, ಜನಪ್ರತಿನಿಧಿಗಳು
ಪೌರ ಕಾರ್ಮಿಕರು ನಾಲ್ಕು ದಿನಗಳಿಂದ ಪ್ರತಿಭಟನೆ ಮಾಡುತಿದ್ದಾರೆ. ನಗರದಲ್ಲಿ ತ್ಯಾಜ್ಯ ವಿಲೇ ಅವ್ಯವಸ್ಥೆಯಾಗಿದೆ. ಹಲವು ಸಂಘಟನೆಗಳು ಪೌರಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇವರ ಅಹವಾಲು ಸ್ವೀಕರಿಸುವುದಕ್ಕಾಗಿಯೂ ಹೋಗಿಲ್ಲ. ಈಗಲೇ ಧರಣಿಗೆ ಸ್ಪಂದನೆ ಸಿಗದಿದ್ದರೆ ನಗರದ ಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.
ಕಸದ ಬುಟ್ಟಿ ಸೇರಿದ ಹಸಿ ಒಣ ಕಸ ವಿಲೇ ಆದೇಶ, ಪಾಲಿಕೆ ಎಡವಿದ್ದೆಲ್ಲಿ? ಮಾಡಬೇಕಿರುವುದೇನು?