
“ಸೋಲಾದಾಗ ಜವಾಬ್ದಾರಿ ನನ್ನದು, ಗೆಲುವಾದಾಗ ನಿನ್ನದು” ಎನ್ನುವ ಅಭೂತಪೂರ್ವ ನಾಯಕ ಸತೀಶ್ ಧವನ್ ಎಂದು ಡಾ. ಕಲಾಂ ಹೇಳುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಆಗಸ್ಟ್ 10 1979 ರಂದು ಎಸ್.ಎಲ್.ವಿ-3 ಮೊದಲ ಪ್ರಯತ್ನದಲ್ಲಿ ವಿಫಲವಾದಾಗ ಪತ್ರಿಕಾಗೋಷ್ಠಿಯಲ್ಲಿ ಇದರ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. 1980 ರಂದು ಎಸ್.ಎಲ್.ವಿ-3 ಯಶಸ್ವಿಯಾದಾಗ ಕಲಾಂ ಅವರಿಗೆ ಮೈಕ್ ನೀಡಿ “ಇಂದಿನ ಪತ್ರಿಕಾಗೋಷ್ಠಿ ನಿನ್ನದು” ಎಂದು ಹೇಳಿ ಅದರ ಯಶಸ್ಸನ್ನು ಅಬ್ದುಲ್ ಕಲಾಂ ಮತ್ತು ಇಸ್ರೊ ತಂಡಕ್ಕೆ ಅರ್ಪಿಸುತ್ತಾರೆ. ಇಂದು ಅವರ ಜನ್ಮದಿನವಾಗಿದೆ.
ಸುದ್ದಿ ಕಣಜ.ಕಾಂ | GUEST COLUMN | 25 SEP 2022
ಭಾರತೀಯ ರಾಕೆಟ್ ವಿಜ್ಞಾನಿ ಮತ್ತು ಫ್ಲೂಯಿಡ್ ಡೈನಾಮಿಕ್ ರಿಸರ್ಚ್ ನ ಪಿತಾಮಹ ಪ್ರೊ.ಸತೀಶ್ ಧವನ್ ( Aatish dhawan) ದೇಶ ಕಂಡ ಶ್ರೇಷ್ಠ ವಿಜ್ಞಾನಿ. ಇಡೀ ಜಗತ್ತೇ ಬಾಹ್ಯಾಕಾಶದ ಸಾಧನೆಯನ್ನು ಕಂಡು ನಿಬ್ಬೆರಗಿನಿಂದ ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಕೀರ್ತಿ ಪದ್ಮ ವಿಭೂಷಣ ಪ್ರೊ.ಸತೀಶ್ ಧವನ್ ಅವರಿಗೆ ಸಲ್ಲುತ್ತದೆ. ಸೆಪ್ಟೆಂಬರ್ 25 ಪ್ರೊ.ಸತೀಶ್ ಧವನ್ರ ಜನ್ಮದಿನವಾಗಿದೆ.
ಭಾರತ ಸರ್ಕಾರವು ಬಾಹ್ಯಾಕಾಶದ ಸಂಶೋಧನೆಗಾಗಿ 1962 ರಲ್ಲಿ ‘ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್’(ಐಎನ್ಸಿಓಎಸ್ಎಆರ್) ನೇಮಿಸಿ, ಡಾ.ವಿಕ್ರಮ್ ಸಾರಾಭಾಯ್ ಅವರ ಕಲ್ಪನೆಯಂತೆ ತಿರುವಂತಪುರಂನಲ್ಲಿ ‘ತುಂಬಾ ಇಕ್ವಾಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಷನ್’
(ಟಿಇಆರ್ಎಲ್ಎಸ್) ನಿರ್ಮಿಸಲಾಗುತ್ತದೆ. 1969ರಲ್ಲಿ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ’(ಇಸ್ರೋ) ಸ್ಥಾಪಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರಕ್ಕೆ ಅಡಿಪಾಯ ಹಾಕಲಾಗುತ್ತದೆ.
ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಕನಸುಗಳು ಇಂದು ರಾಕೆಟ್ ರೂಪದಲ್ಲಿ ಹಾರಾಡುತ್ತಿದ್ದು, ಬಾಹ್ಯಾಕಾಶ ಸಂಶೋಧನೆ ಮೂಲಕ ಜನಸಾಮಾನ್ಯರ ಒಳಿತಿನ ಕನಸು ಕಂಡಿದ್ದ ಡಾ.ವಿಕ್ರಮ್ ಸಾರಾಭಾಯ್ ಅವರ ಅಂತರಿಕ್ಷ ವಿಜ್ಞಾನದ ಹಕ್ಕಿಗೆ ಶಕ್ತಿ ತುಂಬಿ, ಹಾರಾಟ ನಡೆಸಲು ಸಾಧ್ಯವಾಗಿಸಿದವರು ಪ್ರೊ.ಧವನ್.
ಅವರು 1920 ರ ಸೆಪ್ಟೆಂಬರ್ 25 ರಂದು ಶ್ರೀನಗರದ ಶ್ರೀಮಂತ ವಿದ್ಯಾವಂತ ಕುಟುಂಬದಲ್ಲಿ ಜನಿಸುತ್ತಾರೆ. ಇವರ ತಂದೆ ದೇವಿದಯಾಳ್ ಧವನ್ ಭಾರತದ ವಿಭಜನೆ ಸಮಯದಲ್ಲಿ ಲಾಹೋರ್ ಹೈಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದರೆ, ಇವರ ಚಿಕ್ಕಪ್ಪ ಬಿ.ಡಿ.ಧವನರು ಪಂಜಾಬಿನ ಗವರ್ನರ್ ಆಗಿದ್ದವರು. ಸತೀಶ್ ಧವನರ ಪತ್ನಿ ನಳಿನಿ ಧವನ್ ಸೈಟೋಜೆನೆಟಿಸಿಸ್ಟ್ ಮತ್ತು ಅವರ ಪುತ್ರಿ ಜ್ಯೋತ್ಸ್ನಾ ಧವನ್ ಕೂಡ ಬಯೋಲಜಿಸ್ಟ್ ಆಗಿದ್ದಾರೆ.
ಸತೀಶ್ ಧವನ್ ಅವರ ವಿದ್ಯಾಭ್ಯಾಸ
ಪ್ರೊ.ಸತೀಶ್ ಧವನ್ ಶೈಕ್ಷಣಿಕವಾಗಿ ಹಲವಾರು ವಿಶೇಷ ಪದವಿಗಳನ್ನು ಪಡೆದಿದ್ದಾರೆ. ಲಾಹೋರ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಲ್ಲಿ ಬಿ.ಎ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ. ಮ್ಯೆಕಾನಿಕಲ್ ಎಂಜಿನಿಯರಿಂಗ್’ನಲ್ಲಿ ಬಿ.ಇ ಪದವಿಯನ್ನು 1945ರಲ್ಲಿ ಪಡೆದು, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿ 1947 ರಲ್ಲಿ ಮಿನ್ನೆಸೋಟ ಯುನಿವರ್ಸಿಟಿಯಲ್ಲಿ ಏರೋನಾಟಿಕ್ ಎಂಜಿನಿಯರಿಂಗ್ನಲ್ಲಿ ಎಂ.ಎಸ್ ಪದವಿಯನ್ನು ಪೂರ್ಣಗೊಳಿಸುತ್ತಾರೆ.
ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕ್ ಎಂಜಿನಿಯರಿಂಗ್’ನಲ್ಲಿ ಬಿ.ಇ ಪದವಿ ಪಡೆದ ಅವರು ಪ್ರಖ್ಯಾತ ಫ್ಲೂಯಿಡ್ ಡೈನಾಮಿನಿಸ್ಟ್ ಪ್ರೊ.ಹ್ಯಾನ್ಸ್ ಡಬ್ಲ್ಯೂ.ಲೀಪ್ಮಾನ್ ಅವರ ಮಾರ್ಗದರ್ಶನದಲ್ಲಿ 1951 ರಲ್ಲಿ ಏರೋಸ್ಪೇಸ್ ತಂತ್ರಜ್ಞಾನ (ಏರೋನಾಟಿಕ್) ಮತ್ತು ಗಣಿತಶಾಸ್ತ್ರ ಎರಡು ವಿಷಯಗಳಲ್ಲಿ ಪಿ.ಎಚ್.ಡಿ ಪದವಿ ಪಡೆದರು.
READ | ಎಂಜಿಯೋಗ್ರಾಮ್ ಪರೀಕ್ಷೆ ಬಳಿಕ ಮುರುಘಾ ಶರಣರು ಆಸ್ಪತ್ರೆಯಿಂದ ಡಿಸ್ಚಾರ್ಜ್
1971 ರ ಡಿಸೆಂಬರ್ನಲ್ಲಿ ಡಾ.ವಿಕ್ರಮ್ ಸಾರಾಭಾಯ್ ಅವರ ಅಕಾಲಿಕ ಮರಣದಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿ (Indira gandhi) ನೇರವಾಗಿ ಧವನ್ರನ್ನು ಸಂಪರ್ಕಿಸಿ ಇಸ್ರೋ(ISRO)ದ ಜವಾಬ್ದಾರಿಗಳನ್ನು ನಿರ್ವಹಿಸಲು ಕೇಳಿಕೊಂಡಾಗ ಅಮೆರಿಕಾ(america)ದ ಕ್ಯಾಲ್ಟೆಕ್ನಲ್ಲಿ ತಮ್ಮ ಅವಧಿ ಪೂರ್ಣಗೊಂಡ ನಂತರ ಇಸ್ರೋದ ಹೊಸ ಜವಾಬ್ದಾರಿಗಳನ್ನು ಒಹಿಸುವುದಾಗಿ ತಿಳಿಸುತ್ತಾರೆ. ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್ಸಿ)ನಿರ್ದೇಶಕ ಸ್ಥಾನದ ಜೊತೆಗೆ ಹೆಚ್ಚುವರಿಯಾಗಿ ಕೇವಲ 1 ರೂಪಾಯಿ ಸಂಬಳ ಪಡೆಯುವ ನಿರ್ಧಾರದೊಂದಿಗೆ 1972ರಲ್ಲಿ ಇಸ್ರೋ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿಯುತ್ತಾರೆ. ಆ ನಂತರ ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆದಿದ್ದೆಲ್ಲವು ಇತಿಹಾಸ!
ಇಸ್ರೊದಲ್ಲಿ ಅವಿರತ ಶ್ರಮ
ಪ್ರೊ.ಸತೀಶ್ಧವನ್ ಅಧಿಕಾರ ವಹಿಸಿಕೊಳ್ಳುವ ಮೊದಲು ಇಸ್ರೊ ಸಂಸ್ಥೆ ಅಣುಶಕ್ತಿ ಇಲಾಖೆ ಮತ್ತು ಫಿಸಿಕಲ್ ರಿಸರ್ಚ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಸ್ರೊಗೆ ಒಂದು ವ್ಯವಸ್ಥಿತ ರಚನೆಯಿಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದನ್ನು ಅರಿತ ಪ್ರೊ.ಧವನ್ “ಬಾಹ್ಯಾಕಾಶ ಇಲಾಖೆ”, “ಬಾಹ್ಯಾಕಾಶ ಆಯೋಗ” ಹಾಗೂ “ಇಸ್ರೊ ಸಂಸ್ಥೆ” ಈ ಮೂರು ಸಂಸ್ಥೆಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಯೋಜಿಸುತ್ತಾರೆ.
ಮರು ನಾಮಕರಣ ಮಾಡಿದ್ದೂ ಇವರೆ
ತಿರುವಂತಪುರದ ಅಣುಶಕ್ತಿ ಇಲಾಖೆ (ಆಟೋಮಿಕ್ ಎನರ್ಜಿ)ಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ಸಿ) ಎಂದು ಮರುನಾಮಕರಣ ಮಾಡಿ ಡಾ.ಬ್ರಹ್ಮ ಪ್ರಕಾಶ್ ಅವರನ್ನು ನಿರ್ದೇಶಕರನ್ನಾಗಿ ಮಾಡಿ ಎಸ್.ಎಲ್.ವಿ-3 ಯೋಜನೆಯ ಜವಾಬ್ದಾರಿಯನ್ನು ಕಲಾಂರಿಗೆ ನೀಡುತ್ತಾರೆ. ಇಸ್ರೋದ “ಆರ್ಯಭಟ” ಉಪಗ್ರಹ ಯೋಜನೆ ನೇತೃತ್ವವನ್ನು ಡಾ.ಯು.ಆರ್.ನಾರಾಯಣ್ ಅವರಿಗೆ ವಹಿಸಿ, ಅಹಮದಾಬಾದ್ನಲ್ಲಿ ಬಾಹ್ಯಕಾಶ ಉಪಯೋಗ ಕೇಂದ್ರ(ಎಸ್ಎಸಿ) ಸ್ಥಾಪಿಸಿ ಪ್ರೊ.ಯಶ್ಪಾಲ್ ಅವರನ್ನು ನಿರ್ದೇಕರನ್ನಾಗಿ ಮಾಡುವ ಮೂಲಕ ಇಸ್ರೋದಲ್ಲಿ ಮಹತ್ತರಸುಧಾರಣೆಗಳನ್ನು ತರುತ್ತಾರೆ.
1979ರಲ್ಲಿ ಮೊದಲ ಉಪಗ್ರಹ “ಆರ್ಯಭಟ”ವನ್ನು ಯಶಸ್ವಿಯಾಗಿ ಉಡ್ಡಾಯನ ಮಾಡಲಾಗುತ್ತದೆ. ನಂತರ ಮೂರು ಪ್ರಾಯೋಗಿಕ ಉಪಗ್ರಳಾದ ಭಾಸ್ಕರ್-1ಮತ್ತು ಭಾಸ್ಕರ್-2 ಹಾಗೂ ಆಪಲ್ಗಳನ್ನು ಅಭಿವೃದ್ದಿ ಪಡಿಸಲಾಗುತ್ತದೆ. ಎಸ್.ಎಲ್.ವಿ-3 ಮೂಲಕ 40ಕಿ.ಲೋ ಚಿಕ್ಕ ಗಾತ್ರದ ರೋಹಿಣಿ ಉಪಗ್ರಹ ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗುತ್ತದೆ.
ಗ್ರಾಮೀಣ ಶಿಕ್ಷಣಕ್ಕೆ ರಿಮೋಟ್ ಸೆನ್ಸಿಂಗ್, ಸ್ಯಾಟೆಲೈಟ್ ಕಮ್ಯೂನಿಕೇಷನ್
ಪ್ರೊ.ಸತೀಶ್ ಧವನ್ ಇಸ್ರೊದ ಅಧ್ಯಕ್ಷರಾಗಿದ್ದಾಗ ಭಾರತದಲ್ಲಿನ ಗ್ರಾಮೀಣ ವಿದ್ಯಾಭ್ಯಾಸದ ಅಭಿವದ್ಧಿಗಾಗಿ ಅನೇಕ ಪ್ರಯೋಗಗಳನ್ನು ಕೈಗೊಂಡು ದೂರದ ಪ್ರದೇಶಗಳನ್ನು ಅಭ್ಯಸಿಸಲು ಸಹಕಾರಿಯಾಗುವಂತೆ ಸೂಕ್ಷ್ಮಗ್ರಾಹಿ ವ್ಯವಸ್ಥೆ(ರಿಮೋಟ್ ಸೆನ್ಸಿಂಗ್)ನಿರ್ಮಾಣ ಮತ್ತು ಉಪಗ್ರಹ ಸಂಪರ್ಕ(ಸ್ಯಾಟೆಲೈಟ್ ಕಮ್ಯೂನಿಕೇಷನ್) ವ್ಯವಸ್ಥೆಗಳ ನಿರ್ಮಾಣಕ್ಕೆ ಅವರು ಹೆಚ್ಚಿನ ಗಮನ ಹರಿಸಿದರು. ಅವರ ದೂರದರ್ಶಿತ್ವದಿಂದ ಇಂಡಿಯನ್ ನ್ಯಾಷನಲ್ ಸ್ಯಾಟೆಲೈಟ್(ಇನ್ಸ್ಯಾಟ್), ಇಂಡಿಯನ್ ರಿಮೋಟ್ ಸೆನ್ಸಿಂಗ್ ಸ್ಯಾಟೆಲೈಟ್ (ಐಆರ್ಎಸ್) ಮತ್ತು “ಕಾಯಕ ಕುದುರೆ” ಎಂದೆ ಖ್ಯಾತಿ ಪಡೆದಿರುವ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್ಎಲ್ವಿ)ಗಳಂತಹ ಮಹತ್ವದ ಸಾಧನೆಗಳಿಗೆ ಅಡಿಪಾಯ ಹಾಕಲಾಗುತ್ತದೆ. ಹಾಗೂ ಜಿಯೋಸಿಕ್ರೋನಸ್ ಸ್ಯಾಟೆಲೈಟ್ ಲಾಂಚ್ ವೆಹಿಕಲ್(ಜಿಎಸ್ಎಲ್ವಿ) ಅಧ್ಯಯನವನ್ನು ಅವರ ಅವಧಿಯಲ್ಲಿಯೇ ಆರಂಭಿಸಲಾಗುತ್ತದೆ.
READ | ಇಂದು ವಿಶ್ವ W3 ದಿನ, ಇದು ಭವಿಷ್ಯದ ಬ್ರಹ್ಮಾಂಡ ದ್ವಾರ, ಇಲ್ಲಿವೆ ಕುತೂಹಲಕಾರಿ ಅಂಶಗಳು
ಪ್ರೊ.ಸತೀಶ್ ಧವನ್ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು
- ಪ್ರೊ.ಧವನ್ರು ಬೋಧನೆ ಮತ್ತು ಸಂಶೋಧನೆಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(ಐ.ಐ.ಎಸ್ಸಿ)ಹೆಚ್ಚಾಗಿ ತಮ್ಮ ಸಮಯವನ್ನು ಕಳೆಯುತ್ತಿದ್ದು, ತಾನೊಬ್ಬ ಪ್ರಾಧ್ಯಾಪಕನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಭಾರತದ ಮೊದಲ ಸೂಪರ್ ಸಾನಿಕ್ ವಿಂಡ್ ಟನೆಲ್ನ್ನು ಐ.ಐ.ಎಸ್ಸಿ ಸ್ಥಾಪಿಸಿದರು. ಅವರ 18 ವರ್ಷಗಳ ಅವಧಿಯಲ್ಲಿ ಐ.ಐ.ಎಸ್ಸಿ ಸಂಸ್ಥೆಯನ್ನು ನಿಧಾನವಾಗಿ ಫ್ಯೂಡಲ್ ಅಕಾಡೆಮಿಯಾಗಿ ತೆರದುಕೊಳ್ಳುವಂತೆ ಮಾಡಿದರು.
- ಪ್ರೊ.ಸತೀಶ್ ಧವನ್ ಬಾಹ್ಯಾಕಾಶ ತಂತ್ರಜ್ಞನಾಗಿದ್ದರೂ ಕೂಡ ಬೌಂಡರಿ ಲೇಯರ್ ಸಂಶೋಧನೆಗೆ ಹೆಚ್ಚಿನ ಶ್ರದ್ಧೆ ವಹಿಸುತ್ತಾರೆ. ಆ ಕ್ಷೇತ್ರದ ಅಭೂತಪೂರ್ವ ಸಾಧನೆಗಳನ್ನು ಪ್ರಖ್ಯಾತ ಬರಹಗಾರ ಹರ್ಮನ್ ಸ್ಕಿಲ್ಚಿಂಗ್ ಅವರ ” ಬೌಂಡರಿ ಲೇಯರ್ ಥಿಯರಿ”ಯಲ್ಲಿ ಸುದೀರ್ಘವಾದ ಪ್ರಸ್ತಾಪಗೊಂಡಿರುವುದನ್ನು ಕಾಣಬಹುದು.
- ಸತೀಶ್ ಧವನ್ ಅವರು ಶ್ರೀಹರಿಕೋಟದಲ್ಲಿ ಸಮಯ ಸಿಕ್ಕಾಗಲೆಲ್ಲ ಹಕ್ಕಿಗಳ ಫೋಟೋಗಳನ್ನು ತೆಗೆಯುತ್ತಿದ್ದ ಅವರು ಅವುಗಳ ಹಾರಾಟ ಕುರಿತು ‘ಬರ್ಡ್ ಫ್ಲೈಟ್’ ಎಂಬ ಪ್ರೌಢ ಪ್ರಬಂಧವನ್ನು ರಚಿಸಿದ್ದಾರೆ.
- ಭಾರತೀಯ ಬಾಹ್ಯಕಾಶ ಕ್ಷೇತ್ರದಿಂದ ದೇಶದ ನಿರ್ಮಾಣಕ್ಕಾಗಿ ಧವನ್ರು ಸಲ್ಲಿಸಿದ ಆಮೂಲಾಗ್ರ ಸೇವೆಯನ್ನು ಗುರುತಿಸಿ ಪದ್ಮ ವಿಭೂಷಣ ಪ್ರಶಸ್ತಿ ಮತ್ತು ಇಂದಿರಾಗಾಧಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಸರ್ಕಾರ ಗೌರವಿಸಿದೆ.
- 2002 ಜನವರಿ 3 ರಂದು ಧವನರು ನಿಧನವಾದ ಸ್ಮರಣಾರ್ಥಕ್ಕೆ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಶ್ರೀಹರಿಕೋಟದ ರಾಕೆಟ್ ಉಡ್ಡಾಯನ ಕೇಂದ್ರಕ್ಕೆ ಸೆಪ್ಟೆಂಬರ್ 5 ರಂದು ಸತೀಶ್ಧವನ್ ರಾಕೆಟ್ ಉಡ್ಡಾಯನ ಕೇಂದ್ರವೆಂದು ಮರು ನಾಮಕರಣ ಮಾಡಿ ಗೌರವ ಸೂಚಿಸಿದ್ದಾರೆ.
ಇಂದು ಇಸ್ರೊ ಸಂಸ್ಥೆ 116 ಸ್ಪೇಸ್ ಪ್ರಾಫ್ಟ್ ಮಿಷನ್, 84 ಲಾಂಚ್ ಮಿಷನ್, 14 ಸ್ಟೂಡೆಂಟ್ ಸ್ಯಾಟೆಲೈಟ್, 2 ರಿ-ಎಂಟ್ರಿ ಮಿಷನ್ಸ್, 34 ದೇಶಗಳ 345 ವಿದೇಶಿ ಸ್ಯಾಟೆಲೈಟ್ಗಳನ್ನು ಉಡ್ಡಾಯನ ಮಾಡಿ, ಮಂಗಳಯಾನ, ಚಂದ್ರಯಾನಗಳನ್ನು ಯಶಸ್ವಿಯಾಗಿ ಮಾಡಿ, ಇಸ್ರೊ ಪ್ರಪಂಚದ 5ನೇ ದೊಡ್ಡ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರೆ ಅದಕ್ಕೆ ವಿಕ್ರಮ್ ಸಾರಾಭಾಯ್ ಮತ್ತು ಧವನ್ರಂತಹ ಶ್ರೇಷ್ಠ ವಿಜ್ಞಾನಿಗಳ ಪರಿಶ್ರಮದ ಫಲ. ದೇಶದ ನಿರ್ಮಾಣಕ್ಕಾಗಿ ಶ್ರಮಿಸಿದ ಪ್ರೊ.ಸತೀಶ್ ಧವನ್ರನ್ನು ಸ್ಮರಿಸಲು ಇದು ಸೂಕ್ತ ಗಳಿಗೆ.
| ಎಂ.ಎಸ್. ಭರತ್, ಅಪ್ರೆಂಟಿಸ್, ವಾರ್ತಾ ಇಲಾಖೆ, ಶಿವಮೊಗ್ಗ
SIIMA Awards | ಮಲೆನಾಡಿನ ಪ್ರತಿಭೆಗೆ ಸೈಮಾ ಅವಾರ್ಡ್, ಇವರ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು