
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿತ್ರನಟ ಸುದೀಪ್ ಅವರು 31 ಗೋವುಗಳನ್ನು ದತ್ತು ಪಡೆದಿದ್ದು, ಖುದ್ದು ಪಶುಪಾಲನಾ ಸಚಿವನಾದ ನಾನು ಸಹ 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದರು.
ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದಲ್ಲಿ ಕರ್ಕಿ ಶ್ರೀಮಠದ ಸಹಕಾರದೊಂದಿಗೆ ನಡೆಯುತ್ತಿರುವ ಜ್ಞಾನೇಶ್ವರಿ ಗೋಶಾಲೆಗೆ ಶುಕ್ರವಾರ ಭೇಟಿ ನೀಡಿ, ಗೋಪೂಜೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
READ | ಚಿನ್ನದ ಬೆಲೆ ನಿರಂತರ ಇಳಿಕೆ ಬಳಿಕ ಮತ್ತೆ ಏರಿಕೆ, ಇಂದಿನ ಬೆಲೆಯೆಷ್ಟು?
ಚಿತ್ರನಟ ಸುದೀಪ್ ಅವರನ್ನು ಪಶುಪಾಲನಾ ಇಲಾಖೆಯ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಇದೇ ಸಂದರ್ಭದಲ್ಲಿ ನಟ ಸುದೀಪ್ ಅವರು 31 ಗೋವುಗಳನ್ನು ದತ್ತು ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಗಳು 11 ಗೋವುಗಳನ್ನು ದತ್ತು ಪಡೆದು ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಅಂತೆಯೇ ಸಾರ್ವಜನಿಕರೂ ಕೂಡ ಇದೇ ಮಾದರಿಯಲ್ಲಿ ಗೋವುಗಳನ್ನು ದತ್ತು ಪಡೆದು ಗೋವುಗಳ ರಕ್ಷಣೆಗೆ ಮುಂದಾಗಬೇಕು. ಇದೇ ರೀತಿಯಲ್ಲಿ ರಾಜ್ಯದ ಎಲ್ಲ ಚುನಾಯಿತ ಪ್ರತಿನಿಧಿಗಳು ತಮ್ಮ ಕಾರ್ಯಕ್ಷೇತ್ರದ ಒಂದು ಗೋಶಾಲೆಯನ್ನು ದತ್ತು ಪಡೆದು ನಿರ್ವಹಿಸಲು ಮನವಿ ಮಾಡಲಾಗುವುದು ಎಂದರು.
ಶಿವಮೊಗ್ಗದ ಸುರಭಿ ಗೋಶಾಲೆಯ ಮುಖ್ಯಸ್ಥ ನಟರಾಜ್ ಭಾಗ್ವತ್, ಮಹಾವೀರ ಗೋಶಾಲೆಯ ಮುಖ್ಯಸ್ಥ ಬಾಬುಲಾಲ್ ಜೈನ್, ಜ್ಞಾನೇಶ್ವರಿ ಗೋಶಾಲೆಯ ಮುಖ್ಯಸ್ಥ ಚಂದ್ರಹಾಸ ರಾಯ್ಕರ್ ಹಾಗೂ ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.