Truck terminal | ಶಿವಮೊಗ್ಗದಲ್ಲಿ ನಿರ್ಮಾಣವಾಗಲಿದೆ 500 ಟ್ರಕ್ ನಿಲುಗಡೆಯ ಹೈಟೆಕ್ ‘ಟ್ರಕ್ ಟರ್ಮಿನಲ್’, ಸೃಷ್ಟಿಯಾಗಲಿವೆ ಉದ್ಯೋಗ, ಇಲ್ಲಿದೆ ಕಂಪ್ಲೀಟ್ ಮಾಹಿತಿ

Truck terminal

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರ ವ್ಯಾಪ್ತಿಯಲ್ಲಿ ವ್ಯವಸ್ಥಿತ ಟ್ರಕ್ ಟರ್ಮಿನಲ್(Truck terminal) ನಿರ್ಮಾಣಕ್ಕಾಗಿ ಎರಡು ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ಥಳವನ್ನು ಅಂತಿಮಗೊಳಿಸಿದ ತಕ್ಷಣ ನಿರ್ಮಾಣ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೇವರಾಜ ಅರಸು ಟರ್ಮಿನಲ್ (devaraj urs truck terminal) ಅಧ್ಯಕ್ಷ ಡಿ.ಎಸ್.ವೀರಯ್ಯ (DS Veeraiah) ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕುರಿತಾಗಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

READ | ಪೊಲೀಸ್ ಇಲಾಖೆಯಲ್ಲಿ 3,484 ಹುದ್ದೆಗಳ ಭರ್ತಿ, ಅರ್ಜಿ ಸಲ್ಲಿಕೆಗೆ 5 ದಿನಗಳಷ್ಟೇ ಬಾಕಿ

ಎಲ್ಲೆಲ್ಲಿ ಸ್ಥಳ ಗುರುತು?
ಸಿದ್ಲೀಪುರ ಸಮೀಪ ಕೆಐಎಡಿಬಿ ಜಮೀನು ಹಾಗೂ ಹರಿಗೆ ಬಳಿ ಜಮೀನು ಗುರುತಿಸಲಾಗಿದೆ. ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ 40 ಎಕರೆ ಸ್ಥಳದ ಅಗತ್ಯವಿದೆ. ಪ್ರತಿ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ 7 ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.
500 ಟ್ರಕ್ ನಿಲುಗಡೆಗೆ ಅವಕಾಶ
ಟ್ರಕ್ ಟರ್ಮಿನಲ್‍ನಲ್ಲಿ ಸುಮಾರು 500 ಟ್ರಕ್‍ಗಳು ತಂಗಲು ವ್ಯವಸ್ಥೆ ಕಲ್ಪಿಸಲಾಗುವುದು. ಇಲ್ಲಿ ತಂಗಲು ಡಾರ್ಮೆಟರಿ, ಕುಡಿಯುವ ನೀರು, ಶೌಚಾಲಯದಂತಹ ಅಗತ್ಯ ಸೌಲಭ್ಯಗಳು, ಪೊಲೀಸ್ ಚೌಕಿ, ಆರೋಗ್ಯ ಕೇಂದ್ರ, ಎಟಿಎಂ, ರೆಸ್ಟೋರೆಂಟ್‍ನಂತಹ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ಸ್ಥಳೀಯವಾಗಿ ಉದ್ಯೋಗವಕಾಶ ಸಹ ಸೃಷ್ಟಿಯಾಗಲಿದೆ ಎಂದು ಹೇಳಿದರು.

Truck terminal 1
ದೇವರಾಜ ಅರಸು ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಮಾತನಾಡಿದರು.

ಗತಿಶಕ್ತಿ ಯೋಜನೆ ಅಡಿ ಮೂಲಸೌಕರ್ಯ
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಸ್ತೆ ಬದಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ಕನಿಷ್ಠ 5 ಎಕರೆ ಜಮೀನು ಅಗತ್ಯವಿದ್ದು, ಜಿಲ್ಲೆಯಲ್ಲಿ ಎರಡು ಸ್ಥಳಗಳನ್ನು ಆದಷ್ಟು ಬೇಗನೆ ಗುರುತಿಸಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 13 ಮತ್ತು 206ರಲ್ಲಿ ಎರಡು ಸ್ಥಳಗಳನ್ನು ಗುರುತಿಸಿ, ಪ್ರಯಾಣಿಕರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈ ಯೋಜನೆಯಡಿ ಪ್ರಯಾಣಿಕರಿಗೆ ಶೌಚಾಲಯ, ಕುಡಿಯುವ ನೀರು, ರೆಸ್ಟೋರೆಂಟ್ ನಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಡಿಯುಡಿಸಿ ಯೋಜನಾ ನಿರ್ದೇಶಕ ಕರಿಭೀಮಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

error: Content is protected !!