
ಸುದ್ದಿ ಕಣಜ.ಕಾಂ ಸಾಗರ
SAGAR: ಅಡಿಕೆ ಕಳ್ಳತನ ಪ್ರಕರಣವೊಂದನ್ನು ಸಾಗರ ಪೊಲೀಸರು ಬೇಧಿಸಿದ್ದು, ಮೂವರು ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಸಹಜಾಪುರ ತಾಲೂಕಿನ ಜ್ಯೋತಿನಗರ ನಿವಾಸಿ ಲಾರಿ ಚಾಲಕ ರಜಾಕ್ ಖಾನ್ ಅಲಿಯಾಸ್ ಸಲೀಂ ಖಾನ್(65), ಗುಜರಾತ ರಾಜ್ಯದ ಅಹಮದಾಬಾದಿನ ಥೇಜು ಸಿಂಗ್(42), ಮಧ್ಯಪ್ರದೇಶ ರಾಜ್ಯದ ಶಹಜಾಪುರ ತಾಲ್ಲೂಕಿನ ಅನೀಸ್ ಅಬ್ಬಾಸಿ (55) ಎಂಬುವವರನ್ನು ಮದ್ಯಪ್ರದೇಶ ರಾಜ್ಯದ ಶಾಜಾಪುರ ಜಿಲ್ಲೆಯ ಶಾಜಾಪುರ ಟೌನ್ ಬೈಪಾಸ್ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ವಶಕ್ಕೆ ಪಡೆಯಲಾಗಿದೆ.
VIDEO REPORT | ಅಡಿಕೆ ಕಳ್ಳರನ್ನು ಬಂಧಿಸಲು ಪೊಲೀಸರು ಸುತ್ತಾಡಿದ್ದು ಮೂರು ರಾಜ್ಯ, ಬರೋಬ್ಬರಿ 22 ದಿನ, ಎಸ್ಪಿ ಹೇಳಿದ್ದೇನು?
1.42 ಕೋಟಿ ಮೌಲ್ಯದ ಅಡಿಕೆ ವಶ
ಆರೋಪಿಗಳಿಂದ ಈ ಪ್ರಕರಣ ಸಂಬಂಧ 350 ಚೀಲದಲ್ಲಿದ್ದ 1,17,60,000 ರೂಪಾಯಿ ಮೌಲ್ಯದ 24,500 ಕೆಜಿ ತೂಕದ ಕೆಂಪು ಅಡಿಕೆ, ಕೃತ್ಯಕ್ಕೆ ಬಳಸಿದ 25 ಲಕ್ಷ ರೂ. ಮೌಲ್ಯದ ಅಶೋಕ ಲೈಲ್ಯಾಂಡ್ ಲಾರಿ ಸೇರಿದಂತೆ ಒಟ್ಟು 1,42,60,000 ರೂ. ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಅಂತರರಾಜ್ಯ ಕಳ್ಳರಾಗಿದ್ದು, ಇವರ ವಿರುದ್ಧ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜ್ಯಸ್ತಾನ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ.
READ | ಮನೆ ಬಾಡಿಗೆ ನೀಡುವ ಬಗ್ಗೆ ಶಿವಮೊಗ್ಗ ಪೊಲೀಸರಿಂದ ಮಹತ್ವದ ಸೂಚನೆ
ಲೋಡ್ ಸಾಗಿಸದೇ ಮೋಸ
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ಅವರ ಗೋದಾಮಿನಿಂದ ದೋಲರಾಮ್ ಅವರಿಗೆ ಸೇರಿದ 24,500 ಕೆಜಿ ತೂಕದ 350 ಚೀಲ ಕೆಂಪು ಅಡಿಕೆಯನ್ನು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಲೋಡ್ ಕಳುಹಿಸಿದ್ದು, ಆರೋಪಿಗಳು ಲೋಡ್ ಅನ್ನು ಅಹಮದಾಬಾದ್ ತೆಗೆದುಕೊಂಡು ಹೋಗದೆ ಮೋಸ ಮಾಡಿದ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ನೀಡಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಸಾಗರ ಉಪ ವಿಭಾಗದ ಪೊಲೀಸ್ ಸಹಾಯಕ ರೋಹನ್ ಜಗದೀಶ್ ಮೇಲುಸ್ತುವಾರಿಯಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವಿ.ಪ್ರವೀಣ್ ಕುಮಾರ್, ಕಾರ್ಗಲ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ತಿರುಮಲೇಶ್ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಮಹರಾಷ್ಟ್ರ ರಾಜ್ಯದ ಕೊಲ್ಲಾಪುರ, ಸೊಲ್ಲಾಪುರ, ಪುಣೆ, ಮುಂಬೈ, ದುಲೆ, ಗುಜರಾತ ರಾಜ್ಯದ ಸೂರತ್, ಹಮ್ಮದಾಬಾದ್, ವಡೋದರಾ, ಮದ್ಯsಪ್ರದೇಶ ರಾಜ್ಯದ ಇಂದೋರ, ಖಜ್ರಾನಾ, ಉಜ್ಜೆನಿ, ರಾಜಘಡಗಳಲ್ಲಿ ಸುಮಾರು 22 ದಿನಗಳ ಕಾರ್ಯಾಚರಣೆ ನಡೆಸಿ, ನವೆಂಬರ್ 18ರಂದು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಎಸ್ಪಿ ಶ್ಲಾಘನೆ, ನಗದು ಬಹುಮಾನ
ಕಾರ್ಯಚರಣೆಯ ವಿಶೇಷ ತಂಡದಲ್ಲಿದ್ದ ವಿ.ಪ್ರವೀಣ್ ಕುಮಾರ್, ತಿರುಮಲೇಶ್ ನಾಯ್ಕ, ಸಾಗರ ಗ್ರಾಮಾಂತರ ಠಾಣಾ ಸಿಬ್ಬಂದಿ ಸನಾವುಲ್ಲಾ, ಶ್ರೀಧರ್, ತಾರಾನಾಥ್, ರವಿಕುಮಾರ್, ಹನುಮಂತಪ್ಪ ಜಂಬೂರ, ಪ್ರವೀಣ್ ಕುಮಾರ್ ಇವರುಗಳ ಉತ್ತಮ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಲಾಗಿದೆ.