Bhadra dam | ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸುವ ಬಗ್ಗೆ ಕೈಗೊಂಡ ನಿರ್ಧಾರವೇನು?

Bhadra meeting

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ಗಣನೀಯ ಪ್ರಮಾಣದ ನೀರಿನ ಕೊರತೆ ಇರುವುದರಿಂದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆದಿರುವ ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ನಿರಂತರ ನೀರು ಹರಿಸಲು ಅನುಕೂಲವಾಗುವಂತೆ ಸೆ.11ರೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಕಾಡಾ ಅಧ್ಯಕ್ಷ ಮಧು ಎಸ್.ಬಂಗಾರಪ್ಪ (Madhu Bangarappa)  ಹೇಳಿದರು.

READ | ರಾಜ್ಯದಲ್ಲೇ ಮೊದಲ ಪ್ರಯತ್ನ, ಶಿವಮೊಗ್ಗದಲ್ಲಿ ಕೆ.ಎ.ದಯಾನಂದ ಐಎಎಸ್ ವಾಚನಾಲಯ, ಆಯ್ಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ವರದಿ

ಬುಧವಾರ ಶಿವಮೊಗ್ಗ ಸಮೀಪದ ಮಲವಗೊಪ್ಪದ (Malavagoppa) ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (BHADRA COMMAND AREA DEVELOPMENT AUTHORITY – CADA)ಯ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಭದ್ರಾ ಜಲಾಶಯದ 83ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿ ಈ ಸಂಬಂಧ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದ್ದರ ಮೇರೆಗೆ ದಿನಾಂಕ ನಿಗದಿಪಡಿಸಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ, ಅದರ ಸದ್ಬಳಕೆ ಹಾಗೂ ರೈತರ ಹಿತ ಕಾಯುವಲ್ಲಿ ಇರಬಹುದಾದ ಸಾಧಕ-ಬಾಧಕಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಳೊಂದಿಗೆ ಚರ್ಚಿಸಲಾಗುವುದು ಎಂದರು.

Market news Logo

ಜಲಾಶಯದಿಂದ ಬಿಡುಗಡೆಯಾಗುವ ಶೇ.30ರಷ್ಟು ನೀರು ಸದ್ಬಳಕೆಯಾಗುತ್ತಿಲ್ಲ. ಅದರ ವ್ಯವಸ್ಥಿತ ನಿರ್ವಹಣೆಗಾಗಿ ಸಿಬ್ಬಂದಿಯನ್ನು ನಿಯೋಜಿಸಿ ಹಾಗೂ ಚಾನಲ್ ಗಳ ದುರಸ್ತಿಗೆ ಅನುದಾನ ನೀಡಬೇಕು. ನೀರನ್ನು ಬೆಳೆಗೆ ಅಗತ್ಯವಿರುವಂತೆ ತಡೆಹಿಡಿಯುವ ಹಾಗೂ ಹರಿಸುವ ಬಗ್ಗೆ ನಿರ್ಣಯ ಕೈಗೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ.
ಬಸವರಾಜಪ್ಪ, ರೈತ ಮುಖಂಡ

Bhadra Dam

ನಿರ್ಧಾರಗಳೇನು?

  1. ರೈತ ಮುಖಂಡರ, ಅಧಿಕಾರಿಗಳ ಹಾಗೂ ತಜ್ಞರ ಅಭಿಪ್ರಾಯ ಪಡೆದು, ಈಗಾಗಲೇ ಬೆಳೆಯಲಾಗಿರುವ ಭತ್ತ, ಬೇಸಿಗೆ ಹಂಗಾಮಿನಲ್ಲಿ ಅಡಿಕೆ, ತೆಂಗು ಮತ್ತು ತೋಟಗಾರಿಕೆ ಬೆಳೆಗಳ ಸಂರಕ್ಷಣೆ ಹಾಗೂ ಈ ಭಾಗದ ಜನರ ಕುಡಿಯುವ ನೀರಿನ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
  2. ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ಅನುಕೂಲವಾಗುವಂತೆ ಮತ್ತೊಮ್ಮೆ ಶೀಘ್ರದಲ್ಲಿ ಸಭೆ ನೀರಾವರಿ ಸಮಿತಿ ಸಭೆ ಕರೆದು ಚರ್ಚಿಸಲಾಗುವುದು. ಕೃಷಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರೈತರ ಹಿತ ಕಾಯುವಲ್ಲಿ ಸರ್ಕಾರ ಬದ್ಧವಾಗಿದೆ.
  3. ವಿಳಂಬವಾದರೂ ಮುಂದಿನ ಕೆಲವೇ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ. ನಿರೀಕ್ಷೆಯಂತೆ ಮಳೆ ಬಂದಲ್ಲಿ ರೈತರ ಎಲ್ಲ ಸಮಸ್ಯೆಗಳಿಗೆ ಸಹಜವಾಗಿ ಪರಿಹಾರ ದೊರೆಯಲಿದೆ.
  4. ರೈತ ಮುಖಂಡರು ನೀಡಿದ ಸಲಹೆಯಂತೆ ಎಡದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ಇಂದಿನಿಂದಲೆ ನಿಲ್ಲಿಸಲು ಸೂಚನೆ ನೀಡಲಾಗಿದೆ. ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲು ಗಮನಹರಿಸಲಾಗುವುದು.

ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್ ಘೋಷಿಸಿ
ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡ ಕೆ.ಟಿ.ಗಂಗಾಧರ್ (KT Gangadhar) ಅವರು ಮಾತನಾಡಿ, ಜಲಾಶಯದಿಂದ ಈಗಾಗಲೇ ಹರಿಸಿರುವ ನೀರು ಅವೈಜ್ಞಾನಿಕವಾಗಿದೆ. ಈಗಿರುವ ನೀರಿನ ಕೊರತೆಯನ್ನು ಸರಿದೂಗಿಸುವುದು ಹೇಗೆಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಆದ್ದರಿಂದ ಸರ್ಕಾರದಿಂದ ಭತ್ತದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ. ತೋಟಗಾರಿಕೆ ಬೆಳೆಗಾರರಿಗೆ ಬೇಸಿಗೆಯಲ್ಲಿ ನೀರನ್ನು ಒದಗಿಸಲು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್ ಘೋಷಿಸುವಂತೆ ಅವರು ಒತ್ತಾಯಿಸಿದರು.
ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಶಾರದಾ ಪೂರ್ಯಾನಾಯ್ಕ್, ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಾ.ಎಂ.ವಿ.ವೆಂಕಟೇಶ್, ಮೀನಾ ನಾಗರಾಜ್, ರೈತ ಮುಖಂಡರಾದ ಕೆ.ಟಿ.ಗಂಗಾಧರ್, ಬಸವರಾಜಪ್ಪ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನೀರಾವರಿ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

Gruha Jyothi scheme | ಗೃಹ ಜ್ಯೋತಿ ಯೋಜನೆಗೆ ನೋಂದಣಿ ಹೇಗೆ, ಯಾರಿಗೆ ಯೋಜನೆ ಲಾಭ? ಏನೆಲ್ಲ ಷರತ್ತುಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!