
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯು ದೇಶೀಯ ಕ್ರಿಕೆಟ್ ಪ್ರೋತ್ಸಾಹಿಸಲು ಮತ್ತು ಮಹಿಳಾ ಕ್ರಿಕೆಟಿಗರನ್ನು ಬೆಳೆಸಲು ದೇಶದಲ್ಲಿ 15 ವರ್ಷದೊಳಗಿನ ಬಾಲಕಿಯರ ಅಂತರ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ (Karnataka state women cricket tournament) ಯನ್ನು ಹಮ್ಮಿಕೊಂಡಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ವಲಯ ಸಂಚಾಲಕ ಎಚ್.ಎಸ್. ಸದಾನಂದ್ ತಿಳಿಸಿದರು.
READ | ಶಿವಮೊಗ್ಗ- ಹೈದ್ರಾಬಾದ್, ಗೋವಾ, ತಿರುಪತಿ ವಿಮಾನದ ವೇಳಾಪಟ್ಟಿ ಇಲ್ಲಿದೆ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ನ.17ರಿಂದ 25ರ ವರೆಗೆ ಏರ್ಪಡಿಸಿದೆ. ದೇಶದ 35 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ಈ ತಂಡಗಳನ್ನು ತಲಾ 6 ತಂಡಗಳಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ’ಎಫ್’ ಗುಂಪಿನ 6 ತಂಡಗಳ ಶಿವಮೊಗ್ಗದ ಟರ್ಫ್ ಅಂಕಣಗಳಲ್ಲಿ ನಡೆಯಲಿದೆ. ಪಂದ್ಯಾವಳಿಗಳು ಶಿವಮೊಗ್ಗದ ನವುಲೆ (Navule) ರಸ್ತೆಯಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣ(KSCA Stadium)ದಲ್ಲಿ ಮತ್ತು ಜೆ.ಎನ್.ಎನ್.ಸಿ.ಇ. (JNNCE)ಮೈದಾನದಲ್ಲಿ ನಡೆಯಲಿವೆ ಎಂದರು.
ಯಾವ ಗುಂಪಿನಲ್ಲಿ ಯಾವ ಟೀಂಗಳು?
ಎಫ್- ಗುಂಪಿನಲ್ಲಿ ಬರೋಡಾ, ಹಿಮಾಚಲ ಪ್ರದೇಶ, ಮಣಿಪುರ, ಪಾಂಡಿಚೇರಿ, ಪಂಜಾಬ್ ಹಾಗೂ ಉತ್ತರ ಪ್ರದೇಶ ರಾಜ್ಯಗಳ ತಂಡಗಳಿವೆ. ಕರ್ನಾಟಕ ರಾಜ್ಯ ಮಹಿಳಾ ತಂಡವು ’ಇ’ ಗುಂಪಿನಲ್ಲಿ ಉತ್ತರ ಪ್ರದೇಶದಲ್ಲಿ ಆಡುತ್ತಿದ್ದು ದೆಹಲಿ, ಅಸ್ಸಾಂ, ಝಾಖಂಡ್, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯ ತಂಡಗಳು ಈ ಗುಂಪಿನಲ್ಲಿ ಇವೆ. ಈ ಪಂದ್ಯಾವಳಿಗಳು ನ.17ರಿಂದ 25 ರವರೆಗೆ ನಡೆಯಲಿವೆ. ಪಂದ್ಯಕ್ಕೂ ಮಧ್ಯ ಒಂದು ದಿವಸದ ವಿಶ್ರಾಂತಿ ಇರುತ್ತದೆ. ದಿನಂಪ್ರತಿ 3 ಪಂದ್ಯಗಳಂತೆ ಒಟ್ಟಾರೆ 15 ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
35 ಓವರ್, ಯಾರೆಲ್ಲ ಭಾಗಿ?
ಈ ಪಂದ್ಯವನ್ನು ಬಿಳಿ ಬಣ್ಣದ ಬಾಲ್ನಲ್ಲಿ ಆಡಲಾಗುವುದು. ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಒನ್ ಡೇ ಲಿಮಿಟೆಡ್ ಓವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ. ಬಿ.ಸಿ.ಸಿ.ಐ.ನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತ್ರೃತ್ವದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಅಗಮಿಸುತ್ತಿದ್ದು, ಈ ಪಂದ್ಯಾವಳಿಗಳನ್ನು ಆಯೋಜಿಸಲು ಶಿವಮೊಗ್ಗ ವಲಯವು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ರಾಜೇಶ್ ಕಾಮತ್, ಐಡಿಯಲ್ ಗೋಪಾಲಕೃಷ್ಣ ಹಾಜರಿದ್ದರು.