Byadagi chilli patent | ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಬ್ಯಾಡಗಿ ಸಂಶೋಧನೆಗೆ ಪೇಟೆಂಟ್, ಕಾರಣವೇನು?

Byadagi

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
000: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯ ಕುರಿತು ಕೈಗೊಂಡ ಸಂಶೋಧನೆಗೆ ಪೇಟೆಂಟ್ ದೊರಕಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಹೊಂದಿದ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ ಬೆಳೆಯ ಕುರಿತು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೈಗೊಂಡ ವಿಶೇಷ ಸಂಶೋಧನೆಗೆ ಇತ್ತೀಚೆಗೆ ಪೇಟೆಂಟ್ ದೊರಕಿದೆ (ಪೇಟೆಂಟ್ ಸಂಖ್ಯೆ: 468204).
ಡಾ.ಭಾಗಣ್ಣರಿಗೆ ಸಂದ ಗೌರವ

Byadagi mirchi Bhagannaಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಡಾ. ಭಾಗಣ್ಣ ಹರಳಯ್ಯ ಅವರು ಅನುವಂಶಿಕ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕರಾದ ಡಾ. ಎಚ್.ಡಿ. ಮೋಹನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಕೈಗೊಂಡ ಪಿ.ಎಚ್.ಡಿ. ಸಂಶೋಧನೆಗೆ ಈ ಗೌರವ ಸಂದಿದೆ.
ಎಲ್ಲೆಲ್ಲಿ ಬೆಳೆಯಲಾಗುತ್ತದೆ ಬ್ಯಾಡಗಿ?
ಬ್ಯಾಡಗಿ ಮೆಣಸಿನಕಾಯಿ ಬೆಳೆಯು ಕರ್ನಾಟಕದ ಹಾವೇರಿ ಜಿಲ್ಲೆಯ ಬ್ಯಾಡಗಿ ಎಂಬ ಸ್ಥಳದಲ್ಲಿ ಅತೀ ಹೆಚ್ಚು ಗುರುತಿಸಿಕೊಂಡಿರುವುದರಿಂದ ಬ್ಯಾಡಗಿ ಮೆಣಸಿನಕಾಯಿ ಎಂದೇ ಪ್ರಖ್ಯಾತಿ ಹೊಂದಿದೆ. ಇದು ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಬೆಳಗಾವಿ ಮತ್ತು ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಬೆಳೆಯಲಾಗುತ್ತದೆ. ಇತ್ತೀಚೆಗೆ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನೀರಾವರಿಯಲ್ಲಿಯೂ ಸಹ ಬೆಳೆಯಲಾಗುತ್ತಿದೆ.

READ | ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿದ್ದ ರೌಡಿಶೀಟರ್ ಬಚ್ಚಾಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

ಸಂಶೋಧನೆಗೇನು ಕಾರಣ?
ಈ ಬೆಳೆಯ ವಿಶೇಷ ಗುಣಲಕ್ಷಣಗಳೆಂದರೆ, ಕಡುಗೆಂಪು ಬಣ್ಣ, ಸುಕ್ಕುಗಟ್ಟಿದ ಮೇಲ್ಮೈ, ವಿಶೇಷ ರುಚಿ, ಅತೀ ಹೆಚ್ಚು ಓಲಿಯೋರೈಸಿನ್ ಅಂಶ ಮತ್ತು ಕಡಿಮೆ ಖಾರದ ಅಂಶ ಹೀಗೆ ವಿಶೇಷ ಗುಣಗಳನ್ನು ಹೊಂದಿರುವ ಈ ಬೆಳೆಗೆ ಭೌಗೋಳಿಕ ಸೂಚ್ಯಂಕ (ಜಿಯೋಗ್ರಾಫಿಕಲ್ ಇಂಡಿಕೇಷನ್) ಕೂಡ ಲಭಿಸಿರುತ್ತದೆ. ಈ ಬೆಳೆಗೆ ಭೌಗೋಳಿಕ ಸೂಚ್ಯಂಕ ಕೊಡಿಸುವಲ್ಲಿ ಡಾ.ಎಚ್.ಡಿ. ಮೋಹನ್ ಕುಮಾರ್ ಅವರು ದೇವಿಹೊಸೂರಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
ದೇವಿಹೊಸೂರಿನ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕೈಗೊಂಡ ಸಮೀಕ್ಷೆಯಲ್ಲಿ ರೈತರು, ವ್ಯಾಪಾರಿಗಳು ಮತ್ತು ಗ್ರಾಹಕರು ಬ್ಯಾಡಗಿ ಮೆಣಸಿನಕಾಯಿ ಬೆಳೆಯು ವರ್ಷದಿಂದ ವರ್ಷಕ್ಕೆ ಅದರ ಮೂಲ ಗುಣಲಕ್ಷಣಗಳು ಮತ್ತು ಇಳುವರಿ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಇದರಿಂದ ರೈತರಿಗೆ ಮತ್ತು ಓಲಿಯೋರೈಸಿನ್ ಇಂಡಸ್ಟ್ರಿಗೆ ನಷ್ಟ ಉಂಟಾಗುತ್ತಿದೆ. ಮುಂದುವರರಿದು ರೂಢಿಯಲ್ಲಿರುವ ಸಸ್ಯ ಅಭಿವೃದ್ಧಿ ಪದ್ಧತಿಯಿಂದ ಅತೀ ಕಡಿಮೆ ಅವಧಿಯಲ್ಲಿ ಹೋಮೋಜೈಗಸ್ ಲೈನ್‍ಗಳನ್ನು ಅಭಿವೃದ್ಧಿಪಡಿಸಿ ಈ ಬೆಳೆಯ ಮೂಲ ಗುಣಲಕ್ಷಣಗಳನ್ನು ಬದಲಿಸದೆ ಅಭಿವೃದ್ಧಿ ಪಡಿಸುವುದು ವಿಜ್ಞಾನಿಗಳಿಗೆ ಸವಾಲಾಗಿರುತ್ತದೆ.
2015ರಿಂದ ನಡೆದ ಸಂಶೋಧನೆ
ಈ ಒಂದು ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಆನುವಂಶಿಕ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕ ಡಾ. ಎಚ್.ಡಿ. ಮೋಹನ್ ಕುಮಾರ್ ಮತ್ತು ಸಂಶೋಧನಾ ವಿದ್ಯಾರ್ಥಿ ಡಾ. ಭಾಗಣ್ಣ ಹರಳಯ್ಯ ಅವರು ಬೆಂಗಳೂರಿನ ಐ ಆಂಡ್ ಬಿ ಸೀಡ್ಸ್ ಪ್ರೈ.ಲಿ. ಕಂಪನಿಯ ಸಹಯೋಗದೊಂದಿಗೆ ಅತೀ ಕಡಿಮೆ ಅವಧಿಯಲ್ಲಿ ಪರಿಪೂರ್ಣ ಹೋಮೋಜೈಗಸ್ ಡಬ್ಬಲ್ ಹ್ಯಾಪ್ಲಾಯ್ಡ್ ಲೈನ್‍ಗಳನ್ನು ಅಭಿವೃದ್ಧಿ ಪಡಿಸಲು 2015 ರಲ್ಲಿ ಸಂಶೋಧನೆ ಆರಂಭಿಸಿ ಅಂಗಾಂಶ ಕೃಷಿ ತಂತ್ರಜ್ಞಾನ ಪದ್ಧತಿಗಳಲ್ಲಿ ಒಂದಾದ ಇನ್‍ವಿಟ್ರೋ ಆ್ಯಂಥರ್ ಕಲ್ಚರ್ ವಿಧಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಒಂದು ವಿಶೇಷ ಸಂಶೋಧನೆಗೆ ಇತ್ತೀಚೆಗೆ ಭಾರತ ಸರ್ಕಾರದಿಂದ ಪೇಟೆಂಟ್ ಲಭಿಸಿರುವುದು ಹೆಮ್ಮೆಯ ಸಂಗತಿ.

Book My HSRP | ಎಚ್.ಎಸ್.ಆರ್.ಪಿಗೆ ಅರ್ಜಿ ಸಲ್ಲಿಕೆ ಹೇಗೆ, ಏನಿದು ಅತಿ ಸುರಕ್ಷಿತ ನೋಂದಣಿ ಫಲಕ? ಇಲ್ಲಿದೆ ವಿವರ

error: Content is protected !!