Life Imprisonment | ಹುಣಸೆ ಮರ ಕಸದ ವಿಚಾರವಾಗಿ ನಡೀತು ಕೊಲೆ, ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ

LIfe Imprisonment Court news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹುಣಸೆ ಮರ ಕಸದ ವಿಚಾರವಾಗಿ ಜಗಳ ಶುರುವಾಗಿದ್ದು, ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ, ಒಬ್ಬರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಶಿಕಾರಿಪುರ ಟೌನ್ ಚೌರಡೇರಕೇರಿಯ ಅವಿನಾಶ್ ಅಲಿಯಾಸ್ ಅವಿ (25), ಕುಂಬಾರಗುಂಡಿಯ ಪ್ರಶಾಂತ್ ಅಲಿಯಾಸ್ ಗುಂಡ (26), ಚನ್ನಕೇಶವ ನಗರದ ಆರ್.ಪ್ರದೀಪ್ (28) ಇವರಿಗೆ ಜೀವಾವದಿ ಶಿಕ್ಷೆ ಮತ್ತು ತಲಾ ₹90,000 ದಂಡ, ದಂಡ ಕಟ್ಟಲು ವಿಫಲರಾದಲ್ಲಿ 2 ವರ್ಷ ಸಾದಾ ಕಾರಾವಾಸ ಶಿಕ್ಷೆ ಹಾಗೂ ಶಿಕಾರಿಪುರ ಟೌನ್‌ ನಿವಾಸಿ ಗುತ್ಯಪ್ಪ ಅಲಿಯಾಸ್ ಗೌತಮ್ (28) ಈತನಿಗೆ ಜೀವಾವಧಿ ಶಿಕ್ಷೆ ಮತ್ತು ₹80,000 ದಂಡ, ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಸಾದಾ ಕಾರಾವಾಸ ಶಿಕ್ಷೆ ಹಾಗೂ ಮಾಯಪ್ಪನಕೇರಿಯ ಅಕ್ಷಯ್ (24) ಈತನ ವಿರುದ್ಧ ಕಲಂ 201 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 3 ವರ್ಷ ಕಾರಾವಾಸ ಶಿಕ್ಷೆ ಮತ್ತು ₹10,000 ದಂಡ, ದಂಡ ಕಟ್ಟಲು ವಿಫಲನಾದಲ್ಲಿ 3 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

READ | ಕೋಟೆ ಮಾರಿಕಾಂಬ ದೇವಿ‌ ಜಾತ್ರೆ ಡೇಟ್ ಫಿಕ್ಸ್, ಜಾತ್ರಾ ಸಮಿತಿ ಅಧಿಕೃತ ಘೋಷಣೆ

ದ್ವೇಷದ ಹಿನ್ನೆಲೆಯಲ್ಲಿ ಕೊಲೆ
2017ರ ಏಪ್ರಿಲ್ 21ರಂದು ಶಿಕಾರಿಪುರ ಟೌನ್ ಚೌರಡೇರಕೇರಿಯ ವಾಸಿಗಳಾದ ಗೋಣಿ ಮೂರ್ತಪ್ಪ (46) ಮತ್ತು ಪಕ್ಕದ ಮನೆಯರಾದ ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ಅವರುಗಳಿಗೆ ಹುಣಸೆ ಮರದ ಕಸದ ವಿಚಾರವಾಗಿ ಜಗಳ ಶುರುವಾಗಿದೆ‌. ಮೂರ್ತಪ್ಪನ ಮೇಲೆ ಕಂದಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆಂದು ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿ ಹರೀಶ್ ಕೆ.ಪಟೇಲ್ ತನಿಖೆ ಪೂರೈಸಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ‌ ಪತ್ರವನ್ನು ಸಲ್ಲಿಸಿದ್ದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ಬಿ.ಆರ್ ಪಲ್ಲವಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹೇಮಂತ್ ಕುಮಾರ್ ಪ್ರಕರಣದ ವಾದ ಮಂಡಿಸಿದ್ದರು.

error: Content is protected !!