ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮಗಳು ಫೆ.19 ಮತ್ತು 20ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದಲ್ಲಿನ ಎಲ್ಲಾ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗಾಗಿ ಯುವ ಸಮೃದ್ಧಿ ಸಮ್ಮೇಳನ – ರಾಜ್ಯಮಟ್ಟದ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
READ | ನಿಮ್ಮ ಬಳಿ ವನ್ಯಜೀವಿಗಳ ಅಂಗಾಂಗಗಳ ಪದಾರ್ಥಗಳಿವೆಯೇ? ಕೂಡಲೇ ಹಿಂದಿರುಗಿಸಿ, ಎಲ್ಲಿಗೆ ನೀಡಬೇಕು?
ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಬೃಹತ್ ಉದ್ಯೋಗಮೇಳದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಉದ್ಯೋಗ ಮೇಳದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ, ಶಾಲಾ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳು ಪ್ರಚಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ ಅವರು, ಸಂಬಂಧಿತ ಇಲಾಖೆಯಿಂದ ಪ್ರಚಾರ ಸಾಮಗ್ರಿಗಳು ಬಂದಿದ್ದು, ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಅಲ್ಲದೇ ಸ್ವಸಹಾಯ ಗುಂಪುಗಳು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರಿಗೆ ತಲುಪುವಂತೆ ಗಮನಹರಿಸಬೇಕೆಂದವರು ನುಡಿದರು.
ಪ್ರಚಾರಕ್ಕೆ ಸೂಚನೆ
ವಿಶೇಷವಾಗಿ ಎಲ್.ಇ.ಡಿ. ಪರದೆಗಳ ಮೇಲೆ ಪ್ರಚಾರಕ್ಕೆ ಪಾಲಿಕೆಯಿಂದ ಕ್ರಮವಹಿಸಬೇಕು. ಅಲ್ಪಸಂಖ್ಯಾತರ ಹಾಸ್ಟೆಲ್‍ಗಳು, ಇತರೆ ಹಿಂದುಳಿದ, ಪರಿಶಿಷ್ಟ ಜಾತಿ ವರ್ಗಗಳ ವಸತಿನಿಲಯಗಳಲ್ಲಿ, ಇಂಜಿನಿಯರಿಂಗ್ ಕಾಲೇಜುಗಳು, ಐ.ಟಿ.ಐ. ಡಿಪ್ಲೋಮಾ ಕಾಲೇಜುಗಳಲ್ಲಿನ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳು, ಯುವನಿಧಿ ಗ್ಯಾರಂಟಿ ಯೋಜನೆಯ ಅರ್ಜಿದಾರರು ಹಾಗೂ ಫಲಾನುಭವಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಹೆಸರನ್ನು ನೋಂದಾಯಿಸಿಕೊಳ್ಳಲಿಚ್ಚಿಸುವವರು ತಮ್ಮ ವಿದ್ಯಾರ್ಹತೆಗೆ ತಕ್ಕ ಹುದ್ದೆಗಳಿಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಅಲ್ಲದೇ ಅಗತ್ಯ ತರಬೇತಿಗಳಿಗಾಗಿಯೂ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರು ತಮ್ಮ ನೋಂದಣಿಗಾಗಿ http://skillconect.kaushalkar.com ನ್ನು ಸಂಪರ್ಕಿಸಬಹುದಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಕೌಶಲ್ಯಾಬಿವೃದ್ಧಿ ಅಧಿಕಾರಿ ಸುರೇಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ, ನಗರ ಯೋಜನಾ ನಿರ್ದೇಶಕ ಮನೋಹರ್, ನರೇಗಾ ಯೋಜನಾ ನಿರ್ದೇಶಕಿ ಶ್ರೀಮತಿ ನಂದಿನಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.