Sahitya sammelana | ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ 10 ನಿರ್ಧಾರಗಳು, ಏನೇನು?

sammelana

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿದ್ದು, 10 ನಿರ್ಣಯಗಳ ನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಸಿ.ಎಂ.ನೃಪತುಂಗ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.

READ | ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಗ್ಗೆ ನಿಮಗೆಷ್ಟು ಗೊತ್ತು?

ಸಮ್ಮೇಳನದ ನಿರ್ಣಯಗಳು

  1. ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ವರ್ಷ ಕಾರ್ಯಕ್ರಮ ಅಗತ್ಯವಾಗಿ ಮುಂದುವರಿಸಬೇಕು. ಸರ್ಕಾರ ಬದಲಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾರ್ಯಕ್ರಮ ನಿಲ್ಲಿಸಿದ್ದೇತಕೆ ಎಂದು ಸಮ್ಮೇಳನ ಪ್ರಶ್ನೆ ಮಾಡುತ್ತದೆ ಹಾಗೂ ವರ್ಷಾಚರಣೆ ಕಾರ್ಯಕ್ರಮ ಮುಂದುವರಿಸಲು ಒತ್ತಾಯಿಸುತ್ತದೆ.
  2. ಸಾಹಿತ್ಯ ಗ್ರಾಮ ಯೋಜನೆ ಅರ್ಧಕ್ಕೆ ನಿಂತಿದೆ. ಸರ್ಕಾರ ಅನುಮತಿ ನೀಡಿದ ನೀಲ ನಕ್ಷೆಯಂತೆ ಯೋಜನೆ ಪೂರ್ಣಗೊಳಿಸಲು ಅಗತ್ಯ ಆರ್ಥಿಕ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಗತ್ಯ ಅಭಿವೃದ್ಧಿಗೆ ಅನುದಾನ ನೀಡಿ ನೆರವಾಗಲು ಸರ್ಕಾರವನ್ನು ಈ ಸಮ್ಮೇಳನ ಒತ್ತಾಯಿಸುತ್ತದೆ.
  3. ಕನ್ನಡ ಶಾಲೆಗಳು ದಿನೇ ದಿನೇ ಸೊರಗುತ್ತಿವೆ. ಅವುಗಳ ಉಳಿವಿಗೆ ಸಮಗ್ರ ಚಿಂತನೆ ನಡೆಸುವಲ್ಲಿ ಸರ್ಕಾರ ಮುಂದಾಗಬೇಕು. ಅಗತ್ಯ ಸೌಲಭ್ಯ ನೀಡಲು ಸೂಕ್ತ ಯೋಜನೆ ರೂಪಿಸಲು ಈ ಸಮ್ಮೇಳನ ಒತ್ತಾಯಿಸುತ್ತದೆ.
  4. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ನಿಯಮಗಳಿಗೆ ತಿದ್ದುಪಡಿ ತರಲು ಸಮ್ಮೇಳನ ಒತ್ತಾಯಿಸುತ್ತದೆ. ಎಂಜಿನಿಯರಿಂಗ್, ಮೆಡಿಕಲ್, ತೋಟಗಾರಿಕೆ, ಪಶುಸಂಗೋಪನೆ, ವೃತ್ತಿ ಪರ ಶಿಕ್ಷಣ, ಸ್ನಾತಕ, ಸ್ನಾತಕೋತ್ತರ ಸೀಟುಗಳ ಆಯ್ಕೆಯಲ್ಲಿ ಮೀಸಲಾತಿ ನೀಡಿ ಕನ್ನಡ ಶಾಲೆ ಉಳಿಸಲು ಅಗತ್ಯ ಕ್ರಮಕೈಗೊಳ್ಳಲು ಸಮ್ಮೇಳನ ಒತ್ತಾಯಿಸುತ್ತದೆ.
  5. ಸಾಫ್ಟವೇರ್ ಕಂಪನಿಗಳು ಸೇರಿದಂತೆ ಸ್ವಂತ ಉದ್ಯಮಗಳ ಪ್ರಾರಂಭಿಸುವಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಲು ಸಮ್ಮೇಳನ ಒತ್ತಾಯಿಸುತ್ತದೆ.
  6. ನಾಮ ಫಲಕಗಳಲ್ಲಿ ಕನ್ನಡ ಭಾಷೆಯ ಶೇ.60 ರಷ್ಟು ಕಡ್ಡಾಯಗೊಳಿಸುವ ಸುಗ್ರಿವಾಜ್ಞೆಗೆ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಮತ್ತೊಮ್ಮೆ ಮನವಿ ಮಾಡಲು ಸರ್ಕಾರಕ್ಕೆ ಸಮ್ಮೇಳನ ಒತ್ತಾಯಿಸುತ್ತದೆ.
  7. ಶಿಲಾ ಶಾಸನಗಳು ಹಾಗೂ ಓಲೆಗರಿಗಳಿಗೆ ಮತ್ತಷ್ಟು ಅಧ್ಯಯನ ಮಾಡುವಂತಹ ಪ್ರೇರಣಾತ್ಮಕ ವೇದಿಕೆಗಳನ್ನು ನಿರ್ಮಾಣ ಮಾಡಲು ಸಮ್ಮೇಳನ ಒತ್ತಾಯಿಸುತ್ತದೆ.
  8. ಭಾಷಾಶಾಸ್ತ್ರದ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಮ್ಮೇಳನ ಒತ್ತಾಯಿಸುತ್ತದೆ.
  9. ಮುಳುಗಡೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು, ಅತ್ಯಾಧುನಿಕ ತಾಂತ್ರಜ್ಞಾನ ಹೊಂದಿದ ಸೌಲಭ್ಯಗಳನ್ನು ಒದಗಿಸಲು ಸಮ್ಮೇಳನ ಸರ್ಕಾರವನ್ನು ಒತ್ತಾಯಿಸುತ್ತದೆ.
  10. ಮಂಗನ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಸಹಾಯಧನ ಮತ್ತು ಪರಿಹಾರ ನೀಡಲು ಸರ್ಕಾರಕ್ಕೆ ಸಮ್ಮೇಳನ ಒತ್ತಾಯಿಸುತ್ತದೆ.

ಸಮಾರೋಪ ಸಮಾರಂಭ
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಮಾತನಾಡಿದ ಸಾಹಿತಿ ಡಾ.ಪ್ರಶಾಂತ್ ನಾಯಕ್, ಜೀವನ ಉತ್ಸಾಹವನ್ನು ಉನ್ನತಿಕರಿಸಲು ಸಾಹಿತ್ಯ ಸಮ್ಮೇಳನಗಳು ಪೂರಕ ಎಂದರು.
ಎಲ್ಲವನ್ನೂ ಪ್ರಶ್ನಿಸುವ ಕಾಲಮಾನದಲ್ಲಿ ನಾವಿದ್ದೇವೆ. ಆಧುನಿಕತೆ ನಮ್ಮನ್ನು ನಿಯಂತ್ರಿಸಲು ಪ್ರಾರಂಭಿಸಿದೆ. ಅನಗತ್ಯ ಆತಂಕ ಗೊಂದಲ ಕುತೂಹಲಗಳಿಗೆ ಆಧುನಿಕ ಸಾಧನ ಮೊಬೈಲ್ ನಿರ್ಮಾಣ ಮಾಡುತ್ತಿದೆ. ಧಾರವಾಹಿಗಳು ನಮ್ಮಲ್ಲಿ ಹೆಣ್ಣಿನ ಬಗೆಗೆ ಖಳನಾಯಕಿಯಂತೆ ಬಿಂಬಿಸುತ್ತಿದ್ದಾರೆ.
ಹೊಸತಲೆಮಾರಿನ ಸಂವೇದನಾಶೀಲತೆ ಬಗ್ಗೆ ವಿಮರ್ಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯುವಸಮೂಹ ಪಠ್ಯ ಪುಸ್ತಕಗಳ ಹೊರತಾಗಿ ಬೇರೆನು ಓದುವ ತಿಳಿದಿಕೊಳ್ಳುವ ಆಸಕ್ತಿ ಕುಂಠಿತಗೊಳ್ಳುತ್ತಿದೆ. ಸಂವೇದನಾಶೀಲತೆಯ ಸಂಘಟನೆ ಮನೆಯಿಂದಲೇ ಆಗಬೇಕಿದೆ. ಅಂತಹ ಸಂಘಟನೆಗೆ ಪೂರಕವಾಗಿ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಿ ನಿಲ್ಲಬೇಕಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ಡಾ.ಎಸ್.ಪಿ.ಪದ್ಮಪ್ರಸಾದ್ ಅವರನ್ನು ಕಸಾಪ ಪದಾಧಿಕಾರಿಗಳು ಸನ್ಮಾನಿಸಿದರು.
ಇದೇ ವೇಳೆ ಸಾಹಿತ್ಯ ಸಂಘಟನೆಗಾಗಿ ಆರ್ಥಿಕವಾಗಿ ಸಹಕರಿಸಿದ ದಾನಿಗಳಿಗೆ, ಕ್ರಿಯಾಶೀಲ ಚಟುವಟಿಕೆಗಳನ್ನು ಸಂಘಟಿಸಿದವರಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ, ಹೆಚ್ಚು ಪ್ರತಿನಿಧಿಗಳ ನೊಂದಣಿ ಮಾಡಿದವರಿಗೆ ಸಮ್ಮೇಳನದ ಪರವಾಗಿ ಅಭಿನಂದಿಸಲಾಯಿತು.

Adoption Process | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ

error: Content is protected !!