MP Election | ಶಿವಮೊಗ್ಗದಲ್ಲಿ ಮತ್ತೆ ಮಾಜಿ ಸಿಎಂ ಫ್ಯಾಮಿಲಿಗಳ ನಡುವೆ ಪಾಲಿಟಿಕ್ಸ್, ತಿಳಿಯಲೇಬೇಕಾದ ಅಂಶಗಳಿವು

Shivamogga MP Election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಲ್ಲಿ ಮತ್ತೆ ಮಾಜಿ ಮುಖ್ಯಮಂತ್ರಿಗಳಿಬ್ಬರ ಕುಟುಂಬಗಳ ನಡುವೆ ರಾಜಕೀಯ ಕದನ ನಡೆಯಲಿದೆ.
ಶಿವಮೊಗ್ಗ ರಾಜಕೀಯ ಶಕ್ತಿ ಕೇಂದ್ರವಾಗಿದ್ದು, ಹಲವು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ಅವರು ಜನಜನಿತ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈ ಕುಟುಂಬದ ಕುಡಿಗಳು ಪರಸ್ಪರ ಎದುರಾಗಲಿವೆ.

Bangarappa Yediyurappa family MP Election

ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಹಾಲಿ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಎಸ್.ಬಂಗಾರಪ್ಪ ಅವರ ಪುತ್ರಿ ಮತ್ತು ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜಕುಮಾರ್ ಅವರ ನಡುವೆ ಸ್ಪರ್ಧೆ ಏರ್ಪಡಲಿದೆ.

READ | ಶಿವರಾತ್ರಿಯಂದೇ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್, ಶಿವಮೊಗ್ಗ ಸೇರಿ ಏಳು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಇಲ್ಲಿದೆ

ತಿಳಿಯಲೇಬೇಕಾದ ಅಂಶಗಳಿವು

  • ಗೀತಾ ಶಿವರಾಜಕುಮಾರ್ ಅವರು ಈ ಹಿಂದೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದರು. ಈಗ ರಾಘವೇಂದ್ರ ಅವರ ವಿರುದ್ಧ ಕಣದಲ್ಲಿದ್ದಾರೆ.
  • 2014ರ ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಅವರು ಸ್ಪರ್ಧಿಸಿದ್ದರು. ಆಗ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿ 6.06 ಲಕ್ಷ ಮತಗಳನ್ನು ಗಳಿಸಿದ್ದರು. ಗೀತಾ 2.40 ಲಕ್ಷ ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು 2,42,911 ಮತ ಪಡೆದಿದ್ದರು. ಗೀತಾ ಮೂರನೇ ಸ್ಥಾನ ಪಡೆದಿದ್ದರು.
  • ಈ ಸಲ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲವಾದರೂ ಈ ಸಲವೂ ರಾಘವೇಂದ್ರ ಅವರೇ ಕಮಲದ ಹುರಿಯಾಳಾಗಿ ಸ್ಪರ್ಧಿಸುವುದು ಬಹುತೇಕ ಖಚಿತ. ಆದುದ್ದರಿಂದ ಮಾಜಿ ಸಿಎಂಗಳ ಎರಡು ಕುಟುಂಬಗಳ ನಡುವೆ 10 ವರ್ಷಗಳ ಬಳಿಕ ಮತ್ತೆ ಸ್ಪರ್ಧೆ ಏರ್ಪಡಲಿದೆ.
  • ಕಳೆದ ಒಂದೂವರೆ ದಶಕಗಳಿಂದ ಯಡಿಯೂರಪ್ಪ ಮತ್ತು ಬಂಗಾರಪ್ಪ ಅವರ ಕುಟುಂಬಗಳ ನಡುವೆ ರಾಜಕೀಯ ಜಿದ್ದಾಜಿದ್ದಿ ಏರ್ಪಡುತ್ತಲೇ ಇದೆ. ಈ ಅವಧಿಯಲ್ಲಿ ಯಡಿಯೂರಪ್ಪ ಮತ್ತು ರಾಘವೇಂದ್ರ ನಾಲ್ಕು ಸಲ ಜಯ ಗಳಿಸಿದ್ದಾರೆ.
  • ಅದು 2009ರ ಲೋಕಸಭೆ ಚುನಾವಣೆ. ಬಿ.ವೈ.ರಾಘವೇಂದ್ರ ಅವರಿಗೆ ಚೊಚ್ಚಲ ಚುನಾವಣೆ. ಆಗ ರಾಜ್ಯದಲ್ಲೇ ಖ್ಯಾತಿ ಪಡೆದಿದ್ದ ಮಾಜಿ ಸಿಎಂ ಬಂಗಾರಪ್ಪ ಅವರ ವಿರುದ್ಧ ಕಣಕ್ಕೆ ಇಳಿದಿದ್ದರು. ಆದರೂ ರಾಘವೇಂದ್ರ 4.82 ಲಕ್ಷ ಹಾಗೂ ಬಂಗಾರಪ್ಪ 4.29 ಲಕ್ಷ ಮತ ಗಳಿಸಿದ್ದರು. ರಾಘವೇಂದ್ರ 52 ಸಾವಿರ ಮತಗಳ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.
  • ಮಧು ಬಂಗಾರಪ್ಪ ಮತ್ತು ಬಿ.ವೈ.ರಾಘವೇಂದ್ರ ನಡುವೆಯೂ ಲೋಕ ಸಮರ ಏರ್ಪಟ್ಟಿತ್ತು. 2018ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರ (5,43,306) ಅವರು ಮಧು ಬಂಗಾರಪ್ಪ (4,91,158) ಅವರನ್ನು 52 ಸಾವಿರ ಮತಗಳಿಂದ ಸೋಲುಣಿಸಿದ್ದರು. ಆಗ ಮಧು ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿದ್ದರು.
  • 2019ರಲ್ಲಿ ರಾಘವೇಂದ್ರ (7,29,872) ಅವರು, ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ (5,06,512) ಅವರನ್ನು 2.23 ಲಕ್ಷ ಮತಗಳ ಬಹುದೊಡ್ಡ ಅಂತರದಿಂದ ಪರಾಜಯಗೊಳಿಸಿದ್ದರು.

BSY BYR

error: Content is protected !!