Basava Jayanthi | ಶಿವಮೊಗ್ಗದ ಹಲವೆಡೆ ಇಂದು ಬಸವ ಜಯಂತಿ, ನಡೆಯಲಿದೆ ಅಂಬಲಿ ದಾಸೋಹ, ಎಲ್ಲೆಲ್ಲಿ ಏನು ಕಾರ್ಯಕ್ರಮ?

Basavanna

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಬಸವಕೇಂದ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮ ಸಡಗರದಿಂದ ಬಸವಜಯಂತಿ ಆಚರಣೆಯನ್ನು ಮೇ 10ರಂದು ಮಾಡಲಾಗುತ್ತಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ ಹೇಳಿದರು.

READ | ಕೆಪಿಸಿಎಲ್ ತಾತ್ಕಾಲಿಕ‌ ಅಂಕ ಪಟ್ಟಿ ಬಿಡುಗಡೆ ಮಾಡಿದ ಕೆಇಎ, ಲಿಂಕ್ ಗಾಗಿ ಓದಿ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ಸಮಾನತೆ ಸಾರಿದ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನಲೆಯಲ್ಲಿ ಈ ವರ್ಷದ ಬಸವಜಯಂತಿಗೆ ವಿಶೇಷ ಮೆರಗು ಬಂದಿದೆ. ಅಂದು ಬೆಳಗ್ಗೆ 8 ಗಂಟೆಗೆ ವಿಶ್ವಗುರು ಬಸವಣ್ಣನವರ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಬಸವಕೇಂದ್ರದಿಂದ ಹೊರಟು, ವೆಂಕಟೇಶ ನಗರದ ಐದನೇ ಅಡ್ಡರಸ್ತೆ, ಅ.ನ.ಕೃ ರಸ್ತೆ, 2ನೆಯ ಅಡ್ಡರಸ್ತೆಯ ಮೂಲಕ ಪುನಹ ಬಸವಕೇಂದ್ರ ತಲುಪುವುದು. ನಂತರ, ಪಾಲ್ಕುರಿಕೆ ಸೋಮನಾಥ ಕವಿ ವಿರಚಿತ 108 ಬಸವಲಿಂಗ ನಾಮಾವಳಿಗಳಿಂದ ವಿಶ್ವಗುರು ಬಸವಣ್ಣನವರಿಗೆ ಪೂಜೆ ಸಲ್ಲಿಸಲಾಗುವುದು. ಪೂಜೆ ನಂತರ, ಅಂಬಲಿ ದಾಸೋಹ, ಶಿವದಾನವನೆರೆಯುವ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಸತ್ಕರಿಸಲಾಗುವುದು.
ಡಾ. ಶ್ರೀ ಬಸವ ಮರುಳುಸಿದ್ದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮಿ ವಹಿಸಲಿದ್ದಾರೆ.
ಅಂಬಲಿ ದಾಸೋಹ
ಬಸವಕೇಂದ್ರ ಹಾಗೂ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ನಗರದ 15 ಸ್ಥಳಗಳಲ್ಲಿ ಅಂಬಲಿ ದಾಸೋಹ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 10ಗಂಟೆಯಿಂದ ಈ ನಿಗದಿತ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅಂಬಲಿ ದಾಸೋಹ ಮಾಡಲಾಗುವುದು ಎಂದು ತಿಳಿಸಿದರು.
ಬಸವಕೇಂದ್ರದ ಉಪಾಧ್ಯಕ್ಷ ಪಿ.ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ ತಳಗಿಹಾಳ್, ಹಾಲಪ್ಪ ಇತರರು ಉಪಸ್ಥಿತರಿದ್ದರು.
ಬೆಕ್ಕಿನಕಲ್ಮಠದಲ್ಲಿ ಬಸವ ಜಯಂತಿ
ಬಸವೇಶ್ವರ ವೀರಶೈವ ಸಮಾಜ ಸೇವಾಸಂಘದಿಂದ ಮೇ 10 ರಂದು ಸಂಜೆ 6 ಕ್ಕೆ ಬೆಕ್ಕಿನಕಲ್ಮಠದಲ್ಲಿ ಮಹಾನ್ ಮಾನವತಾವಾದಿ ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಜಗದೀಶ್ ಕಾರ್ಯಕ್ರಮ ಉದ್ಘಾಟನೆ ಮಾಡುವರು. ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಗಾಯತ್ರಿದೇವಿ ಸಜ್ಜನ್ ಭಾಗವಹಿಸುವರು. ಡಯೆಟ್ ಉಪನ್ಯಾಸಕಿ ಕೆ.ವಿ.ಜ್ಯೋತಿ ಕುಮಾರಿ ಉಪನ್ಯಾಸ ನೀಡುವರು. ಸುಮಾ ಹೆಗಡೆ ತಂಡದಿಂದ ವಚನ ಗಾಯನ ನಡೆಯಲಿದೆ.

error: Content is protected !!