ಸುದ್ದಿ ಕಣಜ.ಕಾಂ | DISTRICT | MARIKAMBA JATRA
ಶಿವಮೊಗ್ಗ: ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆತಿದೆ. ಸಂಪ್ರದಾಯದಂತೆ ಗಾಂಧಿ ಬಜಾರ್ ನಲ್ಲಿ ಅಮ್ಮನವರ ಪ್ರಥಮ ಪೂಜೆ ನೆರವೇರಿದ್ದು, ದರ್ಶನಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.
ಕೋಟೆ ಶ್ರೀ ಮಾರಿಕಾಂಬ ಪೂಜೆ ಹೇಗೆ ನಡೆಯಿತು, ಭಕ್ತರಿಗಾಗಿ ಏನೇನು ವ್ಯವಸ್ಥೆ ಮಾಡಲಾಗಿದೆ, ಹೇಗಿದೆ ಸ್ಥಿತಿ? (VIDEO REPORT)
ಗಾಂಧಿ ಬಜಾರ್ ಅನ್ನು ತಾಯಿಯ ತವರು ಮನೆ ಎಂಬ ನಂಬಿಕೆಯಿದ್ದು, ಅಲ್ಲಿ ಮಂಟಪವನ್ನು ನಿರ್ಮಿಸಿ, ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಬೆಳಗ್ಗೆ ಪರದೆಯನ್ನು ಸರಿಸಿ ಪ್ರಥಮ ನೆರವೇರಿಸಲಾಗಿದೆ. ಅಮ್ಮನವರ ದರ್ಶನ ಪಡೆದ ಭಕ್ತ ಸಮೂಹ ಘೋಷಣೆಗಳನ್ನು ಕೂಗಿತು.
READ | ಮಾರಿಕಾಂಬ ಜಾತ್ರೆ, ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗದ ವ್ಯವಸ್ಥೆ
ನಾಡಿಗರಿಂದ ಪ್ರಥಮ ಪೂಜೆ
ಬಿ.ಬಿ.ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗ ಕುಟುಂಬದಿಂದ ದೇವಿಯ ಪ್ರಥಮ ಪೂಜೆ ನೆರವೇರಿತು. ಮಂಗಳಾರತಿ ಬೆಳಗಲಾಯಿತು. ಇದೆಲ್ಲವನ್ನೂ ಕಂಡು ಭಕ್ತರು ಪುನಿತರಾದರು.
ದರ್ಶನಕ್ಕೆ ಆಗಮಿಸುತ್ತಿರುವ ಭಕ್ತ ಸಮೂಹ
ತಾಯಿಯ ದರ್ಶನ ಪಡೆಯುವುದಕ್ಕಾಗಿ ಗಾಂಧಿ ಬಜಾರ್ ಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಬೆಳ್ಳಂಬೆಳಗ್ಗೆಯಿಂದ ಭಕ್ತ ಸಾಗರವೇ ಆಗಮಿಸುತ್ತಿದೆ. ಭಕ್ತರ ಸಾಲು ಗಾಂಧಿ ಬಜಾರ್ ನಿಂದ ಮೈಲಾರೇಶ್ವರ ದೇವಸ್ಥಾನ ದಾಟಿದೆ.
ಪೊಲೀಸ್ ಬಿಗಿ ಬಂದೋಬಸ್ತ್
ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ತಾಯಿಯ ದರ್ಶನಕ್ಕೆ ಬರುವುದರಿಂದ ಮುಂಜಾಗ್ರತೆಗಾಗಿ ಬಿ.ಎಚ್.ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ದ್ವಿಚಕ್ರ ವಾಹನಗಳ ನಿಲುಗಡೆಗೆ ವೀರಶೈವ ಹಾಸ್ಟೆಲ್ ಪಕ್ಕದ ರಸ್ತೆಯಲ್ಲಿ ಅವಕಾಶ ನೀಡಲಾಗಿದೆ. ಎಲ್ಲ ಕಡೆಗಳಲ್ಲಿ ಬ್ಯಾರಿಕೆಡ್ ಹಾಕಲಾಗಿದ್ದು, ಪೊಲೀಸರ ಬಿಗಿ ಬಂದೋಬಸ್ತ್ ಇದೆ.