Railway Line | ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗಕ್ಕೆ ಡೆಡ್ ಲೈನ್, ಯಾವಾಗ ಮುಗಿಯಲಿದೆ ಕಾಮಗಾರಿ?

shivamogga ranebennur railway 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಿಂದ ಶಿಕಾರಿಪುರ (Shikaripura) ನಡುವಿನ ರೈಲ್ವೆ ಹೊಸ ಮಾರ್ಗ(Railway new line)ದ ಕಾಮಗಾರಿಯನ್ನು 2025ರ ಡಿಸೆಂಬರ್ ಒಳಗಡೆ ಪೂರ್ಣಗೊಳಿಸುವುದಾಗಿ ನೈರುತ್ಯ ರೈಲ್ವೆ (south western railway) ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮಾಹಿತಿ ನೀಡಿದರು.
2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಮಲೆನಾಡಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗುವ 1,200 ಕೋಟೆ ರೂ.ಗಳ ಅಂದಾಜು ವೆಚ್ಚದಲ್ಲಿ ಮಂಜೂರಾಗಿರುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಯೋಜನೆಯ ಮೊದಲನೇ ಹಂತವಾದ ಶಿವಮೊಗ್ಗ-ಶಿಕಾರಿಪುರ (46 ಕಿ.ಮೀ) ನಡುವಿನ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಸಹ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

BY Raghavendra
ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಭೆಯಲ್ಲಿ ಮಾತನಾಡಿದರು.

ಕೋಚಿಂಗ್ ಡಿಪೋ ಕಾಮಗಾರಿ
ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಜಿಲ್ಲೆಯಲ್ಲಿ ಮೊದಲನೇಯದ್ದಾಗಿದೆ. 2020-21ರ ಮುಂಗಡ ಪತ್ರದಲ್ಲಿ ಸುಮಾರು 100 ಕೋಟಿಗಳ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿದ್ದು, ರಾಜ್ಯ ಸರ್ಕಾರವು ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. 3 ಪ್ಲಾಟ್ ಫಾರಂಗಳನ್ನೊಳಗೊಂಡ ಕೋಟೆಗಂಗೂರಿನ ನೂತನ ರೈಲ್ವೆ ನಿಲ್ದಾಣ, 2 ಪಿಟ್ ಲೈನ್, 3 ಸಿಕ್ ಲೈನ್, 3 ಸ್ಟೇಬಲಿಂಗ್ ಲೈನ್ ಗಳನ್ನೊಳಗೊಂಡಿದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. 2024ರ ಮೇ ಅಥವಾ ಜೂನ್ ಗೂ ಮೊದಲು ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನೈರುತ್ಯ ರೈಲ್ವೆಯ ಸಭೆಯಲ್ಲಿ ತಿಳಿಸಿರುತ್ತಾರೆ.

READ | ಮಲೆನಾಡಿಗೆ ಎಚ್ಚರಿಕೆ, ಶಿವಮೊಗ್ಗದಲ್ಲಿ 29 ಬೋರ್’ವೆಲ್‌ ಫೇಲ್!

ಸಂಸದ ಬಿ.ವೈ.ರಾಘವೇಂದ್ರರ ಬೇಡಿಕೆಗಳೇನು?

  • ಸಂಸದರು ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಾಡಿಯನ್ನು ಸಹ ಇಲ್ಲಿ ನಿರ್ವಹಣೆ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಕೋರಲಾಗಿ, ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅವರು ಈ ಬಗ್ಗೆ ಪೂರಕವಾಗಿ ಸ್ಪಂದಿಸಿ ನೂತನ ಯೋಜನಾ ವರದಿಯನ್ನು ಸಿದ್ಧಪಡಿಸಿ ರೈಲ್ವೆ ಮಂಡಳಿಯಿಂದ ಮಂಜೂರಾತಿ ಪಡೆಯಲು ಕ್ರಮ ವಹಿಸುವುದಾಗಿ ತಿಳಿಸಿರುತ್ತಾರೆ.
  • ತಾಳಗುಪ್ಪ – ತಡಸ – ಹೊನ್ನಾವರ – ಶಿರಸಿ – ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗ ಯೋಜನೆಯ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ನೈರುತ್ಯ ರೈಲ್ವೆಯು ಸರ್ವೇ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿರುತ್ತದೆ. ಸಂಸದರು ಈ ಯೋಜನೆ ಮಂಜೂರು ಮಾಡಲು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಈಗಾಗಲೇ ಕೋರಿದ್ದು ನೈರುತ್ಯ ರೈಲ್ವೆಯಿಂದಲು ಸಹ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು.
  • ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಯನ್ನು ಮಾಡಲು ಸಂಸದರು ಒತ್ತಾಯಿಸಿದರು. ಈ ಕುರಿತಂತೆ ಅಗತ್ಯ ಕ್ರಮಕೈಗೊಳ್ಳುವುದಾಗಿ ನೈರುತ್ಯ ರೈಲ್ವೆಯವರು ತಿಳಿಸಿರುತ್ತಾರೆ.
  • ಸಂಸದರು ಬೆಂಗಳೂರು ಹಾಗೂ ಶಿವಮೊಗ್ಗ ನಗರಗಳ ನಡುವೆ ವಂದೇ ಭಾರತ ರೈಲು ಸೇವೆಯನ್ನು ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಕುರಿತಂತೆ ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.

ಶಿವಮೊಗ್ಗ – ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ರೈಲುಗಳ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವಂತೆ ಮಾಡಲು ಸಂಸದರು ಮನವಿ ಮಾಡಿದರು. ನೈರುತ್ಯ ರೈಲ್ವೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಸಾಧ್ಯವಿರುವಲ್ಲಿ ಶಿಫಾರಸು ಮಾಡುವಂತೆ ಸೂಕ್ತ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿರುತ್ತಾರೆ ಎಂದು ಸಂಸದರು ತಿಳಿಸಿದ್ದಾರೆ.
ನೈರುತ್ಯ ರೈಲ್ವೆಯ ಮಹಾಪ್ರಬಂಧಕ ಸಂಜೀವ್, ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Shimoga Airport | ಶಿವಮೊಗ್ಗದಿಂದ ವಿಮಾನ ಹಾರಾಟ ಇನ್ನಷ್ಟು ವಿಳಂಬ, ಕಾರಣವೇನು? ಯಾವ ಮಾರ್ಗಗಳಲ್ಲಿ ಮೊದಲ ಹಾರಾಟ?

error: Content is protected !!