ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ (Charaka Women’s Multipurpose Industrial Co-operative Society Ltd)ದ ಮಹಿಳೆಯರು ಶುಕ್ರವಾರ ಚರಕ ಪ್ರಸನ್ನ (Charaka) ನೇತೃತ್ವದಲ್ಲಿ ಪಿಕೆಟಿಂಗ್ ಮಾಡಲಾಯಿತು.
ಕೈಮಗ್ಗ ಮತ್ತು ಜವಳಿ ಇಲಾಖೆ(Department of Handloom and Textiles)ಯ ನೀತಿನಿಯಮಗಳ ಸಮಗ್ರ ಹಾಗೂ ಸ್ವತಂತ್ರ ತನಿಖೆ ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.
READ | ಶಾಹಿ ಎಕ್ಸ್ ಪೋರ್ಟ್ ವಿರುದ್ಧ ಕೇಸ್ ದಾಖಲಿಸಲು ಸೂಚನೆ, ಕಾರಣವೇನು?
ಸಂಘವು ನೈಸರ್ಗಿಕ ಬಣ್ಣದ ಕೈಮಗ್ಗ ಬಟ್ಟೆ ಹಾಗೂ ಸಿದ್ಧ ಉಡುಪುಗಳ ಕ್ಷೇತ್ರದಲ್ಲಿ ದೇಶದಲ್ಲಿಯೇ ಮೊದಲ ಸಂಸ್ಥೆಯಾಗಿದೆ. 700 ಜನ ನೇಕಾರರು ಹಾಗೂ ತತ್ಸಂಬಂದಿ ಕೆಲಸಗಾರರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ದೇಸಿ ಎಂಬ ಬ್ರಾಂಡಿನ ಅಂಗಡಿಗಳನ್ನು ಕರ್ನಾಟಕದಾದ್ಯಂತ ಹೊಂದಿದೆ. ನೇಕಾರರು ಹಾಗೂ ಇತರೆ ಕೆಲಸಗಾರರಿಗೆ ಕೆ.ಎಚ್.ಡಿ.ಸಿ.ಗಿಂತ ಹೆಚ್ಚಿನ ಮಜೂರಿ ಹಾಗೂ ಇತರ ಸೌಲಭ್ಯಗಳನ್ನು ಕೊಡುವಲ್ಲಿ ಸಂಘವು ಯಶಸ್ವಿಯಾಗಿದೆ. ಸಂಘದ 90 ಪ್ರತಿಶತ ಸದಸ್ಯರು ಬಿ.ಪಿ.ಎಲ್, ಮಿತಿಗಿಂತ ಕೆಳಗಿನ ಬಡಜನರೇ ಆಗಿರುತ್ತಾರೆ. ಸಂಘವು ಲಾಭದಾಯಕವಾಗಿ ನಡೆದಿರುತ್ತದೆ. ದುರಂತವೆಂದರೆ, ಈ ಎಲ್ಲ ಸಂಗತಿಗಳನ್ನೂ ಕಡೆಗಣಿಸಿರುವ ರಾಜ್ಯ ಸರಕಾರದ ಕೈಮಗ್ಗ ಇಲಾಖೆಯು ನಮ್ಮನ್ನು ತೀವ್ರತರವಾದ ಅಸಡ್ಡೆ ಹಾಗೂ ಅವಗಣನೆಗೆ ಗುರಿಮಾಡಿದೆ. ಸಂಘಕ್ಕೆ ಬರಬೇಕಾಗಿದ್ದ ಹಣವನ್ನು ಕಳೆದ ಹಲವಾರು ವರ್ಷಗಳಿಂದ ಖಾಸಗಿ ಬ್ಯಾಂಕಿನಲ್ಲಿ ಇಟ್ಟುಕೊಂಡು, ಕೊಳೆಸಿ, ವರ್ಷಗಟ್ಟಲೆ ಸತಾಯಿಸುವುದು ಇಲಾಖೆಯ ಪರಿಪಾಠವಾಗಿದೆ ಎಂದು ಡಿಸಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ ತಿಳಿಸಲಾಗಿದೆ.
ಯೋಜನೆ ಪೂರ್ಣಗೊಂಡರೂ ತಲುಪದ ಹಣ: ಆರೋಪ
10 ವರ್ಷಗಳ ಹಿಂದೆಯೇ ಸರಕಾರವು ಸಂಘದೊಟ್ಟಿಗೆ ಆರಂಭಿಸಿದ ಪಿ.ಪಿ.ಪಿ. ಯೋಜನೆಯೊಂದರ ಹಣವು, ಯೋಜನೆ ಪೂರ್ಣಗೊಂಡ ಹಲವು ವರ್ಷಗಳ ನಂತರವೂ ಸಂಘಕ್ಕೆ ತಲುಪಿರುವುದಿಲ್ಲ. ಮಾತ್ರವಲ್ಲ, ಕುಪಿತರಾದ ಅಧಿಕಾರಿಗಳು ಪವಿತ್ರವಸ್ತ್ರ ಎಂಬ ಹೆಸರಿನ ಸದರಿ ಯೋಜನೆಯನ್ನೇ ರದ್ದುಗೊಳಿಸಿ ದುರಂಹಕಾರ ಮೆರೆದಿರುತ್ತಾರೆ ಎಂದು ಚರಕ ಪ್ರಸನ್ನ ಆರೋಪಿಸಿದರು.
ಭ್ರಷ್ಟ ವ್ಯವಸ್ಥೆಯಿಂದಾಗಿ ಕರ್ನಾಟಕದ ಹೆಚ್ಚಿನ ಕೈಮಗ್ಗ ಸಹಕಾರ ಸಂಘಗಳು ನೆಲಕಚ್ಚಿವೆ. ಕೆಎಚ್.ಡಿ.ಸಿ. ಮುಚ್ಚುವ ಪರಿಸ್ಥಿತಿ ತಲುಪಿದೆ. ಕರ್ನಾಟಕದ ಎಲ್ಲ ನೇಕಾರ ಸಹಕಾರ ಸಂಘಗಳ ಒಕ್ಕೂಟ ವ್ಯವಸ್ಥೆಯಾಗಬೇಕಿದ್ದ ಕಾವೇರಿ ಹ್ಯಾಂಡ್ಲೂಮ್ಸ್ ಹತ್ತಾರು ವರ್ಷಗಳಿಂದ ಕೋಮಾದಲ್ಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಗಮನಿಸಬೇಕಾಗಿದೆ ಒತ್ತಾಯ
ಈ ಎಲ್ಲ ಸಂಗತಿಗಳನ್ನೂ ಹಿಂದಿನ ಸರಕಾರದ ಮುಖ್ಯಮಂತ್ರಿ ಗಮನಕ್ಕೆ ಹಲವು ಬಾರಿ ತಂದಿರುತ್ತೇವೆ. ಕಳೆದ ಒಂದು ತಿಂಗಳಿನಿಂದ ಚರಕದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಆದರೆ, ಸರ್ಕಾರ ಇದಕ್ಕೆ ತಲೆಯೇ ಕೆಡಿಸಿಕೊಂಡಿಲ್ಲ ಎಂದು ಟೀಕಿಸಿದರು.
Good News | ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ 5 ಇ-ಬಸ್ಗಳ ಸಂಚಾರ ಪ್ರಾರಂಭ, ಎಷ್ಟಿದೆ ರೇಟ್?