ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023-24ನೇ ಸಾಲಿನ ಮುಂಗಾರಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ (paddy) ಖರೀದಿದಲು ರೈತರ ನೋಂದಣಿ ಮಾಡುವ ಪ್ರಕ್ರಿಯೆಯನ್ನು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ. ನ.15 ರಿಂದ ಹೆಸರನ್ನು ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದ್ದಾರೆ.
ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಭತ್ತವನ್ನು ನೀಡಲು ಇಚ್ಛಿಸುವ ರೈತರು ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ತಂತ್ರಾಂಶದ ಗುರುತಿನ ಪತ್ರ, ಆಧಾರ್ ಸಂಖ್ಯೆ ಮತ್ತು ತಮ್ಮ ಬ್ಯಾಂಕ್ ಖಾತೆಯ ಎಲ್ಲಾ ವಿವರಗಳು ಇರುವ ಪಾಸ್ ಪುಸ್ತಕದ ಇತ್ತೀಚಿನ ದೃಢೀಕೃತ ಪ್ರತಿಯೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.
ಮಾ.31ರ ವರೆಗೆ ಭತ್ತ ಖರೀದಿ
ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳ ಎ.ಪಿ.ಎಂ.ಸಿ ಯಾರ್ಡ್ ಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದು ಡಿಸೆಂಬರ್ 1, 2023 ರಿಂದ ಮಾರ್ಚ್ 31, 2024ರವರೆಗೆ ರೈತರಿಂದ ಭತ್ತ ಖರೀದಿಸಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡ ಸಂದರ್ಭದಲ್ಲಿ ಅಗತ್ಯವಿದ್ದ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಗಳನ್ನು ತೆರೆದು ಭತ್ತ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯ ಭತ್ತಕ್ಕೆ ₹2,183 ಹಾಗೂ ಗ್ರೇಡ್-ಎ ಭತ್ತಕ್ಕೆ ₹2,203 ರಂತೆ ಸರ್ಕಾರವು ಬೆಲೆ ನಿಗದಿಪಡಿಸಿದೆ. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.