ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿಗೆ ಕ್ರೀಡಾ ಕ್ಷೇತ್ರದಲ್ಲಿ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ.
ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪದ ಸರ್ವೇ ನಂಬರ್ 50ರಲ್ಲಿ 30 ಎಕರೆ ಭೂ ಪ್ರದೇಶದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾದರಿಯ ಕ್ರೀಡಾ ಗ್ರಾಮ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕ್ರೀಡಾ ಗ್ರಾಮ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಗ್ರಾಮ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಅಗತ್ಯವಾಗಿರುವ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿಯೇ ಬಿಡುಗಡೆಗೊಳಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಬಿ.ವೈ.ರಾಘವೇಂದ್ರ, ಸಂಸದರು
ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರು ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದಾಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅಲ್ಲದೇ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಕಾಲದಲ್ಲಿ ಮಾಹಿತಿ ನೀಡಿ ಸಹಕರಿಸಿದ್ದರು ಎಂದರು.
ಕೇಂದ್ರ ತಂಡ ಭೇಟಿ: ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದ ಕುರಿಯನ್ ಮ್ಯಾಥ್ಯೂ, ಹರೀಶ್, ಸುರೇಶ್ ಮತ್ತು ಅಸುತೋಷ್ ಘೋಷ್ ಅವರನ್ನೊಳಗೊಂಡ ಕೇಂದ್ರದ ಕ್ರೀಡಾ ತಜ್ಞರ ತಂಡವು ಸ್ಥಳ ಪರಿಶೀಲನೆಗಾಗಿ ಆಗಮಿಸಿದೆ.
ತಂಡದ ನಿರೀಕ್ಷೆಯಂತೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ತರಬೇತಿಗಾಗಿ ಬಳಸಲಾಗುತ್ತಿರುವ ನೆಹರೂ ಕ್ರೀಡಾಂಗಣ, ಪ್ರಸ್ತಾಪಿತ ಕ್ರೀಡಾ ಗ್ರಾಮಕ್ಕಿರುವ ಅಂತರ, ಸೌಲಭ್ಯಗಳು ಮತ್ತಿತರ ವಿವರಗಳನ್ನು ತಂಡಕ್ಕೆ ಒದಗಿಸಲಾಗಿದೆ. ನಗರದ ಕ್ರೀಡಾಸಕ್ತರ ಬಹುದಿನಗಳ ಕನಸು ಶೀಘ್ರದಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ.
ಕ್ರೀಡಾ ಗ್ರಾಮದಲ್ಲಿ ಏನಿರಲಿದೆ?
ಅಥ್ಲೆಟಿಕ್, ವಾಲಿಬಾಲ್, ಫುಟ್ ಬಾಲ್, ಹಾಕಿ ಜೂಡೋ, ಕುಸ್ತಿ ಸೇರಿದಂತೆ ವಿವಿಧ ಗುಂಪು ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.