ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೊದಲನೇ ಹಂತದ ಗ್ರಾಮ ಪಂಚಾಯಿತಿ ಮತದಾನ ಪೂರ್ಣಗೊಂಡಿದೆ. ಜಿಲ್ಲೆಯ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.8312ರಷ್ಟು ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಭದ್ರವಾಗಿದೆ.
ತಾಲೂಕುವಾರು ಮತದಾನ
- ಶಿವಮೊಗ್ಗದಲ್ಲಿ ಶೇ.84.91
- ಭದ್ರಾವತಿಯಲ್ಲಿ ಶೇ.82.60
- ತೀರ್ಥಹಳ್ಳಿಯಲ್ಲಿ ಶೇ.81.33
113 ಗ್ರಾಮ ಪಂಚಾಯಿತಿಗೆ ಮಂಗಳವಾರ ಬೆಳಗ್ಗೆ ಏಳರಿಂದ ಮತದಾನ ಆರಂಭಗೊಂಡಿದ್ದು, ಸುಸೂತ್ರವಾಗಿ ಚುನಾವಣಾ ಪ್ರಕ್ರಿಯೆ ಮುಗಿದಿದೆ.
ಒಟ್ಟು 3,71,521 ಮತದಾರರಲ್ಲಿ 3,08,790 ಜನ ತಮ್ಮ ಮತದಾನದ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಹೆಚ್ಚು ಮತದಾನವೇನಾಗಿಲ್ಲ. ಎರಡು ಗಂಟೆಯಲ್ಲಿ ಕೇವಲ ಶೇ.9.43ರಷ್ಟು ಮತದಾನವಾಗಿತ್ತು. ನಂತರದ ಎರಡು ಗಂಟೆಗಳಲ್ಲಿ ಅಂದರೆ ಬೆಳಗ್ಗೆ 11 ಗಂಟೆಯವರೆಗೆ ಶೇ.24.28 ಮತದಾನವಾಗಿತ್ತು. ಮಧ್ಯಾಹ್ನ 1ರ ಹೊತ್ತಿಗೆ ಶೇ.46.17, 3ಗಂಟೆಗೆ 62.93 ಹಾಗೂ ಸಂಜೆ 5 ಗಂಟೆಯವರೆಗೆ ಶೇ.83.12ರಷ್ಟು ಮತಗಳು ಚಲಾವಣೆಯಾಗಿವೆ.
ವಿಶೇಷವೆಂದರೆ, ಶಿವಮೊಗ್ಗ ತಾಲೂಕಿನ ತುಪ್ಪೂರು ಗ್ರಾಮದಲ್ಲಿ ಸಂಹೆ 5 ಗಂಟೆಯಾದರೂ ಭಾರಿ ಸಂಖ್ಯೆಯಲ್ಲಿ ಜನ ಮತ ಚಲಾವಣೆಗೆ ಸರದಿಯಲ್ಲಿ ನಿಂತಿದ್ದರು. ಇನ್ನುಳಿದ ಕಡೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಮತದಾರರು ಆಗಮಿಸುತ್ತಲೇ ಇದ್ದರು. ಶತಾಯುಷಿಗಳು, ವಿಶೇಷಚೇತನರು ತಮ್ಮ ಹಕ್ಕು ಚಲಾವಣೆಗಾಗಿ ಬಂದಿದ್ದು ವಿಶೇಷವಾಗಿತ್ತು.