ಸುದ್ದಿ ಕಣಜ.ಕಾಂ
ಬೆಂಗಳೂರು: ಕೆಜಿಎಫ್ ಚಾಪ್ಟರ್ 1ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯನ್ನು ನೋಡಿ ಪುಳುಕಿತರಾಗಿದ್ದ ಅಭಿಮಾನಿಗಳು ಚಾಪ್ಟರ್ 2ಗಾಗಿ ಕಾತೂರದಿಂದ ಕಾಯುತ್ತಿದ್ದರು. ಕೊನೆಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಅಧಿಕೃತ ಟೀಸರ್ ಜನವರಿ 7ರಂದು ರಾತ್ರಿ 9.29ಕ್ಕೆ ಬಿಡುಗಡೆ ಆಗಿದೆ.
ಟೀಸರ್ ಬಿಡುಗಡೆಯಾದ 49 ನಿಮಿಷಗಳಲ್ಲಿ 5 ಮಿಲಿಯನ್ ವೀಕ್ಷಣೆ ಕಂಡಿದೆ. ರಾಕಿ ಭಾಯ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ನಲ್ಲಿಯ ರೋಮಾಂಚನಕಾರಿ ದೃಶ್ಯಗಳು ಯಶ್ ಫ್ಯಾನ್ಸ್ಗಳಲ್ಲಿ ಕೌತುಕ ಹುಟ್ಟುವಂತೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಚಿತ್ರದ ಯೂನಿವರ್ಸಲ್ ಟೀಸರ್ ಬಿಡುಗಡೆ ಮಾಡಿದೆ.
ಚಾಪ್ಟರ್ 2ರಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್, ರವೀನಾ ಟಂಡನ್ ನಟಿಸಿದ್ದಾರೆ. ಯಶ್ ಅವರ ಜನ್ಮ ದಿನವಾದ ಜನವರಿ 8ರಂದು ಟೀಸರ್ ಬಿಡುಗಡೆಗೆ ಉದ್ದೇಶಿಸಲಾಗಿತ್ತು. ಆದರೆ, ಮುಂಚೆಯೇ ಯಾರೋ ಲೀಕ್ ಮಾಡಿದ್ದರಿಂದ ನಿಗದಿತ ದಿನಕ್ಕಿಂತ ಒಂದು ದಿನ ಮೊದಲೇ ಬಿಡುಗಡೆ ಮಾಡಲಾಗಿದೆ. ಯಶ್ ಅಭಿಮಾನಿಗಳು ಟೀಸರ್ ನೋಡಿದ ಬಳಿಕ ಸಿನಿಮಾಗೋಸ್ಕರ ಕಾಯುತ್ತಿದ್ದಾರೆ.
ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಟೀಸರ್ ನೋಡಿ, ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೆ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ಟೀಸರ್ನಲ್ಲಿ ನರಾಚಿಯ ಏರಿಯಲ್ ದೃಶ್ಯಗಳು ಮೈಜುಮ್ಮೆನಿಸುತ್ತವೆ. ಎದೆ ಢವಢವ ಹೊಡೆದುಕೊಳ್ಳುತ್ತದೆ. ಆಧುನಿಕ ಶೈಲಿಯ ಗನ್ನಿಂದ ರಾಕಿ ಭಾಯ್ ವೈರಿಗಳನ್ನು ಸೆದೆ ಬಡಿಯುವ ಹಾಗೂ ಅದರಿಂದ ಬಿಸಿಯಾದ ಗನ್ನಿಂದಲೇ ಸಿಗರೇಟ್ ಹಚ್ಚುವ ದೃಶ್ಯಗಳು ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ.
ಬದಲಾದ ಸ್ಲೋಗನ್: ಚಾಪ್ಟರ್ 1ರಲ್ಲಿ ಪವರ್ ಫುಲ್ ಪೀಪಲ್ಸ್ ಕಂ ಫ್ರಂ ಪವರ್ ಫುಲ್ ಪ್ಲೇಸ್ ಎಂದಿದ್ದ ಸ್ಲೋಗನ್ ಚಾಪ್ಟರ್ 2ರಲ್ಲಿ ಪವರ್ ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ ಫುಲ್ ಎಂದು ಬದಲಾಗಿದೆ.