ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ 19 ಹಾಲು ಉತ್ಪಾದಕರ ವ್ಯವಹಾರದ ಮೇಲೆಯೂ ಬರೆ ಎಳೆದಿತ್ತು. ಅದರ ಪರಿಣಾಮವಾಗಿ ಹಾಲಿನ ಮಾರಾಟ ಶೇ.50ರಷ್ಟು ಕುಸಿದಿತ್ತು. ಆದರೆ, ಈಗ ಪರಿಸ್ಥಿತಿ ಮುಂಚಿನ ಸ್ಥಿತಿಗೆ ಬರಲಾರಂಭಿಸಿದ್ದು, ಶಿಮುಲ್ ಹಾಲು ಉತ್ಪಾದಕರಿಗೆ ಸಂಕ್ರಾಂತಿ ಕೊಡುಗೆ ನೀಡಿದೆ.
ಫೆಬ್ರವರಿಯಲ್ಲಿ ಶಿಮುಲ್ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ) ರಾಜ್ಯದಲ್ಲೇ ಅತ್ಯಧಿಕ ಲೀಟರ್ಗೆ 28 ರೂಪಾಯಿ ನೀಡಿತ್ತು. ಆದರೆ, ಕೋವಿಡ್ನಿಂದಾಗಿ ಮಾರಾಟ ಕುಸಿದಿತ್ತು. ಈಗ ಮತ್ತೆ ದರ ಏರಿಕೆ ಮಾಡಲಾಗಿದೆ. ರೈತರಿಗೆ ನೀಡುತ್ತಿರುವ ದರವನ್ನೇನೋ ಏರಿಕೆ ಮಾಡಲಾಗಿದೆ. ಆದರೆ, ಗ್ರಾಹಕರ ಮೇಲೆ ಇದರಿಂದ ಯಾವುದೇ ಹೊರೆ ಬೀಳುವುದಿಲ್ಲ. ಕಾರಣ, ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ.
– ಡಿ.ಆನಂದ್, ಶಿಮುಲ್ ಅಧ್ಯಕ್ಷ
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡಿರುವ ಶಿಮುಲ್ ಪ್ರತಿ ಲೀಟರ್ಗೆ 2.75 ರೂ. ಹೆಚ್ಚಿಸಲು ನಿರ್ಧರಿಸಿದೆ. ಇದು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ವರದಾನವಾಗುವ ನಿರೀಕ್ಷೆ ಇದೆ. ಶಿಮುಲ್ ಮುಖ್ಯ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಹೊಸ ದರ ಜನವರಿ 13ರಿಂದ ಅನ್ವಯವಾಗಲಿದೆ.
ಇದನ್ನೂ ಓದಿ । ಲಕ್ಷಾಂತರ ಜನರಿಗೆ ಪಿಡುಗಾಗಿ ಕಾಡುತ್ತಿರುವ ಹಕ್ಕಿ ಜ್ವರ ಕಂಪ್ಲೀಟ್ ರಿಪೋರ್ಟ್
ಜನವರಿ 13ರ ರಿಂದ ಲೀಟರಿಗೆ ರೂ. 25.25: ರೈತರಿಗೆ ಈಗ ಶಿಮುಲ್ನಿಂದ ಲೀಟರ್ ಹಾಲಿಗೆ 22.50 ರೂಪಾಯಿ ದರವಿದೆ. ಪರಿಷ್ಕೃತ ದರದನ್ವಯ ಜನವರಿ 13ರಿಂದ 25.25 ರೂಪಾಯಿ ಆಗಲಿದೆ. ಜತೆಗೆ, ಸರ್ಕಾರದ ಪ್ರೋತ್ಸಾಹ ಧನ ಐದು ರೂಪಾಯಿ ಪ್ರತ್ಯೇಕವಾಗಿ ಸಿಗಲಿದೆ. ಇದೊಂದು ಅತ್ಯಂತ ಪ್ರಮುಖ ನಿರ್ಧಾರವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗಲಿದೆ.