ಜನ್ಮದಿನ ಕಾರ್ಯಕ್ರಮದಲ್ಲಿ ಭಾವುಕರಾದ ಸಿಎಂ ಯಡಿಯೂರಪ್ಪ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಶೇಷ ಕಾರಣವೊಂದಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ ನನಗೆ ಪ್ರೀತಿ ತೋರಿ, ಇಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ನೀಡಿದ ಶಿವಮೊಗ್ಗ ಜನರಿಗೆ ನಾನು ಸದಾ ಆಭಾರಿ. ಶಿವಮೊಗ್ಗವನ್ನು ಮುಂದೆ ಯಾರೇ ಬಂದರೂ ಅಭಿವೃದ್ಧಿಗೆ ಕೆಲಸಗಳೇ ಇರಬಾರದು ಆ ಮಟ್ಟಕ್ಕೆ ಕೊಂಡೊಯ್ಯುವುದೇ ನನ್ನ ಆಸೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Nammolume cm bsy 5
ನಗರದ ಹಳೆಯ ಜೈಲು ಆವರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಿತಿಯು ಭಾನುವಾರ ಸಂಜೆ ಆಯೋಜಿಸಿದ್ದ ಬಿ.ಎಸ್.ವೈ ಅವರಿಗೆ ನಮ್ಮೊಲುಮೆ ಅಭಿಮಾನದ ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
`ಮಂಡ್ಯದಲ್ಲಿ ಈಗಲೂ ನನ್ನ ಸಂಬಂಧಿಕರಿದ್ದಾರೆ. ನಾನು ನನ್ನ ಮಾವ ಅವರೊಂದಿಗೆ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದೆ. ನಾನು ಅಲ್ಲಿಗೆ ಹೋದರೇ ಈಗಲೂ ಜನರಿಗೆ ಥಟ್ ಎಂದು ನೆನಪಾಗುವುದೇ ನಾನು ನಿಂಬೆ ಹಣ್ಣು ಮಾರಾಟ ಮಾಡುತ್ತಿದ್ದ ದಿನಗಳು’ ಎಂದು ಹಳೆಯ ದಿನಗಳನ್ನು ಸ್ಮರಿಸಿಕೊಂಡರು.
ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಕಂಡಿದ್ದೇನೆ. ಹಲವು ತೊಂದರೆಗಳನ್ನು ದಾಟಿ, ಹೋರಾಟಗಳ ಮೂಲಕ ಈ ಹಂತಕ್ಕೆ ತಲುಪಿದ್ದೇನೆ. ಇದಕ್ಕೆ ಮೂಲ ಕಾರಣ ಶಿವಮೊಗ್ಗದ ಜನ ಹಾಗೂ ಆರ್.ಎಸ್.ಎಸ್. ಎಂದು ಹೇಳಿದರು.
ಸಮಾರಂಭವನ್ನು ಬಿಜೆಪಿ ವರಿಷ್ಠ ಡಿ.ಎಚ್.ಶಂಕರಮೂರ್ತಿ ಉದ್ಘಾಟಿಸಿದರು. ಸಚಿವರಾದ ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ರುದ್ರೇಗೌಡ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಸುಕುಮಾರ ಶೆಟ್ರು, ಭಾರತಿ ಶೆಟ್ಟಿ, ಆರ್.ಎಸ್.ಎಸ್. ಪ್ರಮುಖ ಪಟ್ಟಾಭಿರಾಮ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಟ ಜಗ್ಗೇಶ್, ಕೋಮಲ್,ಶ್ರುತಿ, ತಾರಾ, ಜ್ಯೋತಿ ಪ್ರಕಾಶ್, ಕೆ.ಕಲ್ಯಾಣ್ , ಡಿ.ಎಸ್.ಅರುಣ್, ಮೇಯರ್ ಸುವರ್ಣ ಶಂಕರ್ ಇತರರಿದ್ದರು.
ರಾಜಕಾರಣದ ತ್ರಿವಿಕ್ರಮ ಪುಸ್ತಕ ಬಿಡುಗಡೆ | ಕೆ.ಪ್ರಸನ್ನಕುಮಾರ್ ಬರೆದಿರುವ `ರಾಜಕಾರಣದ ತ್ರಿವಿಕ್ರಮ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸುನೀಲ್ ಪುರಾಣಿಕ್ ನಿರ್ದೇಶನದ ಬಿಎಸ್.ವೈ ಬದುಕು ಕಟ್ಟಿಕೊಡುವ ಕಿರುಚಿತ್ರ ಪ್ರದರ್ಶಿಸಲಾಯಿತು. ಯಡಿಯೂರಪ್ಪ ಅವರ ಬಗ್ಗೆ ವಿಶೇಷವಾಗಿ ಸಂಯೋಜಿಸಲಾದ ಹಾಡನ್ನು ಗಾಯಕ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಡಿದರು.

error: Content is protected !!