ಸುದ್ದಿ ಕಣಜ.ಕಾಂ | DISTIRICT | WILD LIFE
ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದ ಹಾಗೂ ರಾಜ್ಯದ ಹಿರಿಯ ಆನೆ ಖ್ಯಾತಿಯ ಗಂಗಾ(85) ವಯೋಸಹಜ ಸಮಸ್ಯೆಗಳಿಂದಾಗಿ ಭಾನುವಾರ ಬೆಳಗ್ಗೆ ಮೃತಪಟ್ಟಿದೆ.
ಅತ್ಯಂತ ಸೌಮ್ಯ ಸ್ವಭಾವದ ಮಾತೃಹೃದಯದ ಗಂಗಾ ನಿಧನ ಹೊಂದಿದ್ದು, ಸಕ್ರೆಬೈಲಿನ ಕ್ರಾಲ್ ನಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
https://www.suddikanaja.com/2021/04/04/elephant-attack-on-doctor-at-sakrebailu-elephant-camp/
ರಾಜ್ಯದ ಎಂಟು ಆನೆಬಿಡಾರಗಳಲ್ಲಿ ಗಂಗಾ ಹಿರಿಯಳು. 1971ರಲ್ಲಿ ಕಾಕನಕೋಟೆಯಲ್ಲಿ ನಡೆದಿದ್ದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸಿಕ್ಕಿದ್ದ ಗಂಗಾ ಸಕ್ರೆಬೈಲು ಆನೆಬಿಡಾರ ಮಾತ್ರವಲ್ಲದೇ ರಾಜ್ಯಕ್ಕೆ ಒಂದು ಆಸ್ತಿಯಾಗಿತ್ತು. ಎಲ್ಲಿಯೇ ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ಇದ್ದರೂ ಇದನ್ನು ಬಳಸಿಕೊಳ್ಳಲಾಗುತಿತ್ತು. ತನ್ನ ಅನುಭವದಿಂದ ಎಂತಹ ಪುಂಡಾನೆ ಇದ್ದರೂ ಸೋಲಿಸಿ ಬಂಧಿಸುತ್ತಿದ್ದಳು ಈ ಗಂಗಾ. ಆದರೆ, ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾಳೆ.
ದಸರಾ ಜಂಬೂ ಸವಾರಿಯಲ್ಲೂ ಭಾಗಿ
ಹಿರಿಯಾನೆ ಗಂಗಾ ಕಳೆದು ಹಲವು ವರ್ಷಗಳ ಕಾಲ ಶಿವಮೊಗ್ಗ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುವುದರಿಂದ ನಿವೃತ್ತಿ ನೀಡಲಾಗಿತ್ತು.
ಮಾತೃಹೃದಯಿ ಗಂಗಾ
ಆನೆಬಿಡಾರದಲ್ಲಿ ಉಳಿದ ಹೆಣ್ಣಾನೆ ಜನ್ಮ ನೀಡಿದರೆ ಅದರ ಪೂರ್ಣ ಆರೈಕೆಯ ಉಸ್ತುವಾರಿಯನ್ನು ಗಂಗಾ ವಹಿಸಿಕೊಳ್ಳುತ್ತಿದ್ದಳು. ಹಿರಿಯ ಅಜ್ಜಿಯಂತೆ ಜೊತೆಯಲ್ಲಿದ್ದು ಆರೈಕೆ ಮಾಡುತಿದ್ದಳು. ಜತೆಗೆ, ವೀನಿಂಗ್ (ಹಾಲು ಬಿಡಿಸುವ ಪ್ರಕ್ರಿಯೆ)ನಲ್ಲೂ ಇದನ್ನು ಬಳಸಿಕೊಳ್ಳಲಾಗುತಿತ್ತು. ಆನೆಗಳನ್ನು ಬೇರೆಡೆಗೆ ಸಾಗಿಸುವುದು ಹೀಗೆ ಏನೇ ಕೆಲಸವಿದ್ದರೂ ಗಂಗಾ ಮುಂದಡಿ ಬರೆಯುತ್ತಿದ್ದಳು.
ಸಕ್ರೆಬೈಲಿನಲ್ಲಿ ಪ್ರಸ್ತುತ 20 ಆನೆ
ಗಂಗಾ ಸಾವಿನ ಬಳಿಕ ಸಕ್ರೆಬೈಲು ಆನೆಬಿಡಾರದಲ್ಲಿ ಪ್ರಸ್ತುತ 20 ಆನೆಗಳು ಉಳಿದಿವೆ. ಅದರಲ್ಲಿ 16 ಗಂಡು, 4 ಹೆಣ್ಣಾನೆಗಳು ಇವೆ.
15 ದಿನಗಳಿಂದ ಕ್ರಾಲ್ ನಲ್ಲೇ ಆರೈಕೆ
80-85 ವರ್ಷವಾಗಿದ್ದ ಗಂಗಾಗೆ ಕಳೆದ ಎರಡು ವರ್ಷಗಳಿಂದ ಆರೋಗ್ಯ ಸಂಬಂಧಿ ನಾನಾ ಸಮಸ್ಯೆಗಳು ಕಾಡಲಾರಂಭಿಸಿವೆ. ಅದರಲ್ಲೂ ಇತ್ತೀಚೆಗಂತೂ ದೇಹ ಇನ್ನಷ್ಟು ಜೀರ್ಣವಾಗಿತ್ತು. ತಿಂದಿದ್ದು ಹೊಟ್ಟೆಯಲ್ಲಿ ನಿಲ್ಲುತ್ತಿರಲಿಲ್ಲ. ಕಾಲಿನಲ್ಲಿ ಊತ.. ಈ ಕಾರಣಗಳಿಂದಾಗಿ ಗಂಗಾಳನ್ನು 15 ದಿನಗಳಿಂದ ಕ್ರಾಲ್ ನಲ್ಲೇ ಆರೈಕೆ ಮಾಡಲಾಗುತಿತ್ತು. ಅಲ್ಲಿಯೇ ಅಗತ್ಯ ಆಹರ ಪೂರೈಸಲಾಗುತಿತ್ತು. ಭಾನುವಾರ ಬೆಳಗ್ಗೆ ಕುಳಿತುಕೊಂಡಲ್ಲೆ ಅಸುನೀಗಿದೆ.
https://www.suddikanaja.com/2020/12/13/senior-elephant-dead-in-sakrebailu-elephant-shivamogga/