ಸುದ್ದಿ ಕಣಜ.ಕಾಂ | DISTRICT | COVID 19
ಶಿವಮೊಗ್ಗ: ಕೋವಿಡ್ 19 ಸೋಂಕಿನಿಂದ ಮೃತ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರವು ಈಗಾಗಲೇ ಘೋಷಿಸಿರುವ ಆರ್ಥಿಕ ನೆರವನ್ನು ಒದಗಿಸಲು ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಿಂದ ಏರ್ಪಡಿಸಲಾಗಿದ್ದ ಕೋವಿಡ್ ಮೃತ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವುದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆ, ಬೆಳೆ, ಆಸ್ತಿ, ಜನ-ಜಾನುವಾರು ಹಾನಿಗಳ ಕುರಿತ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಸರ್ಕಾರವು ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತರಾದ ವ್ಯಕ್ತಿಗಳಲ್ಲಿ ಮೊದಲ ಹಂತದಲ್ಲಿ 1,064 ಜನ ಮೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೃತರ ಕುಟುಂಬದ ಸದಸ್ಯರು ನೆರವಿಗಾಗಿ ಅರ್ಜಿ ಸಲ್ಲಿಸುವವರೆಗೆ ಕಾಯದೇ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರ ಮನೆಗೆ ಧಾವಿಸಿ, ಅವರಿಂದ ಅರ್ಜಿ ಹಾಗೂ ಮಾಹಿತಿ ಪಡೆದು, ಆನ್ಲೈನ್ ಮೂಲಕ ಮಾಹಿತಿ ಉನ್ನತೀಕರಿಸಿ ಮಾಹಿತಿ ನೀಡುವಂತೆಯೂ ನಿರ್ದೇಶನ ನೀಡಿದರು.
READ | ಆಯುಧ ಪೂಜೆಗೆ ಶೃಂಗಾರಗೊಂಡ ಸಿಗಂದೂರು ಲಾಂಚ್, ಶರಾವತಿ ಹಿನ್ನೀರಿಗೆ ಲಾಂಚ್ ಶುರುವಾದ ರೋಚಕ ಇತಿಹಾಸ ಇಲ್ಲಿದೆ
ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಪರಿಹಾರ
ಮೃತರ ಕುಟುಂಬವು ಬಿಪಿಎಲ್ ಕುಟುಂಬ ವ್ಯಾಪ್ತಿಗೊಳಪಟ್ಟಿದ್ದರೆ ರಾಜ್ಯ ಸರ್ಕಾರವು ₹1 ಲಕ್ಷ ಆರ್ಥಿಕ ನೆರವು ಹಾಗೂ ಕೇಂದ್ರ ಸರ್ಕಾರವು ಕೋವಿಡ್ನಿಂದ ಮೃತರಾದ ಎಲ್ಲ ಕುಟುಂಬಗಳಿಗೆ ₹50,000 ನೆರವು ಒದಗಿಸಲಿದೆ. ಈ ಪರಿಹಾರ ಧನ ಪಡೆಯಲು ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಸಂಬಂಧಿತ ಅಧಿಕಾರಿಗಳು ಇನ್ನಾದರೂ ವಿಳಂಬಕ್ಕೆ ಅವಕಾಶ ಕೊಡದೆ ಈ ಮಾಸಾಂತ್ಯದೊಳಗಾಗಿ ಮಾಹಿತಿಯನ್ನು ಸಂಗ್ರಹಿಸಿ, ಫಲಾನುಭವಿಗಳಿಗೆ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ತಾಕೀತು ಮಾಡಿದರು.
ಮೂಲ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಆನ್ಲೈನ್ನಲ್ಲಿ ಮಾಹಿತಿ ತುಂಬಲು ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಮೃತ ವ್ಯಕ್ತಿಯು ಹೊರಗಿನ ಜಿಲ್ಲೆಯವರಾಗಿದ್ದಲ್ಲಿ ಅಂತಹವರು ತಮ್ಮ ಮೂಲ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕೋವಿಡ್-19 ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕಾರ್ಯಕ್ರಮ ಹಾಗೂ ಚಟುವಟಿಕೆಗಳಿಗೆ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಅನುದಾನದ ಖರ್ಚು-ವೆಚ್ಚಗಳ ಕುರಿತು ಬಳಕೆ ಪ್ರಮಾಣಪತ್ರವನ್ನು ಕೂಡಲೇ ನೀಡಬೇಕು. ಕೊರತೆ ಉಂಟಾಗಿದ್ದಲ್ಲಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದಲ್ಲಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
READ | ಲಾಕ್ಡೌನ್ ಲವ್ ಸ್ಟೋರಿ, ‘ಒಂದು ಪ್ರೀತಿ ಎರಡು ಕನಸು
ಎಲ್ಲರಿಗೂ ಲಸಿಕೆ ನೀಡಲು ಸೂಚನೆ
ಕೋವಿಡ್ ನಿಯಂತ್ರಣಕ್ಕಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರದಿಂದಲೇ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತಿದೆ. ಇದುವರೆಗೂ ಮೊದಲ ಹಂತದ ಲಸಿಕೆ ಪಡೆಯದಿರುವ ವ್ಯಕ್ತಿಗಳನ್ನು ಗುರುತಿಸಿ, ಲಸಿಕೆ ಹಾಕುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು, ತಾಲೂಕು ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ತಹಸೀಲ್ದಾರರು ಸಭೆ ನಡೆಸಿ, ಎಲ್ಲ ಗ್ರಾಮಗಳಲ್ಲಿ ಆಂದೋಲನ ರೂಪದಲ್ಲಿ ಕಾರ್ಯಕ್ರಮ ಏರ್ಪಡಿಸಿ, ಜನರ ಮನವೊಲಿಸಿ, ಲಸಿಕೆ ನೀಡಲು ಕ್ರಮ ವಹಿಸಬೇಕು. ಅದಕ್ಕೂ ಮುನ್ನ ಗ್ರಾಮಗಳಲ್ಲಿ ಲಸಿಕೆ ಪಡೆದ ಮತ್ತು ಪಡೆಯದಿರುವ ವ್ಯಕ್ತಿಗಳ ವಿವರವಾದ ಮಾಹಿತಿ ಹೊಂದಿರಬೇಕು. ಈ ಮಹತ್ವದ ಕಾರ್ಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆಯುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ್, ಆರ್.ಸಿ.ಎಚ್.ಅಧಿಕಾರಿ ಡಾ. ನಾಗರಾಜ್ ನಾಯ್ಕ್ ಸೇರಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2021/02/03/casual-leave-for-treatment-of-cancer-to-government-employees/