ಡೆತ್ ನೋಟ್ ಬರೆದು ಮಿಸ್ಸಿಂಗ್ ಆಗಿದ್ದ ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ಗಿರಿರಾಜ್ ಪತ್ತೆ, ಎಲ್ಲಿ ಗೊತ್ತಾ?

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಜಿಲ್ಲಾಡಳಿತ ಹಾಗೂ ಪೊಲೀಸರ ಪಾಲಿಗೆ ತಲೆನೋವಾಗಿದ್ದ ಪ್ರಕರಣವೊಂದು ಸುಖಾಂತ್ಯ ಕಾಣುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಕಳೆದ 11 ದಿನಗಳಿಂದ ನಾಪತ್ತೆಯಾಗಿದ್ದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಗಿರಿರಾಜ್ ಪತ್ತೆಯಾಗಿದ್ದಾರೆ.
ಕಾರ್ಯ ಹಾಗೂ ಮೇಲಾಧಿಕಾರಿಗಳ ಒತ್ತಡ ಹಿನ್ನೆಲೆ ಬಸವನಗುಡಿಯಲ್ಲಿರುವ ತಮ್ಮ ಮನೆಯಿಂದಲೇ ಸೆಪ್ಟೆಂಬರ್ 28ರಂದು ನಾಪತ್ತೆಯಾಗಿದ್ದರು. ಬೆಳಗ್ಗೆ ಹೋದ ವ್ಯಕ್ತಿ 9 ಗಂಟೆಯ ಸುಮಾರಿಗೆ ವಾಟ್ಸಾಪ್ ನಲ್ಲಿ ಡೆತ್ ನೋಟ್ ಕಳುಹಿಸಿದ್ದಾರೆ. ಇದರಿಂದಾಗಿ, ಭಾರೀ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಸಿಬ್ಬಂದಿ ಕೂಡ ಆತಂಕಕ್ಕೆ ಒಳಗಾಗಿದ್ದರು‌. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತಿದ್ದರು. 

ಗಿರಿರಾಜ್ ಸಿಕ್ಕಿದ್ದು ಎಲ್ಲಿ?
ಧರ್ಮಸ್ಥಳದ ಕಟ್ಟೆಯೊಂದರ ಮೇಲೆ ಸುಸ್ತಾಗಿ ಗಿರಿರಾಜ್ ಅವರು ಮಲಗಿದ್ದರು. ಅವರನ್ನು ಕಂಡು ದೇವಸ್ಥಾನ ಆಡಳಿತ ಮಂಡಳಿಯವರು ಗುರುತು ಹಿಡಿದಿದ್ದಾರೆ. ಬಳಿಕ ತೀವ್ರ ನಿತ್ರಾಣರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿರಿರಾಜ್ ಅವರು ಗುರುವಾರ ರಾತ್ರಿ ಧರ್ಮಸ್ಥಳದಲ್ಲಿ‌ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಜಾಗೃತರಾಗಿರುವ ಪೊಲೀಸರು ತಂಡವೊಂದನ್ನು ಕಳುಹಿಸಿದ್ದಾರೆ. ಇಂದು ರಾತ್ರಿಯೇ ಅವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಬರಲಾಗುವುದು.

ಎರಡು ದಿನಗಳ ಹಿಂದಷ್ಟೇ ನಡೆದಿತ್ತು ಹುಡುಕಾಟ
ಪೊಲೀಸರು ಎರಡು ದಿನಗಳ‌ ಹಿಂದಷ್ಟೇ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲಿಯೇ ತಂಗಿದ್ದು, ನಾನಾ ಕಡೆ ವಿಚಾರಣೆಯನ್ನೂ ಮಾಡಿದ್ದಾರೆ. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಗುರುವಾರ ರಾತ್ರಿ ಧರ್ಮಸ್ಥಳದಲ್ಲಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2021/09/29/giriraj-missing-case/

error: Content is protected !!