ಸುದ್ದಿ ಕಣಜ.ಕಾಂ | TALUK | SPECIAL STORY
ತುಮರಿ (ಶಿವಮೊಗ್ಗ): ಸಾಗರದಿಂದ ಸಿಗಂದೂರು ಮಾರ್ಗವಾಗಿ ಮರಕುಟಕ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 369ಇ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಂಚಾರಕ್ಕೆ ಪ್ರಹಸನ ಪಡುತ್ತಿದ್ದಾರೆ.
ಇಷ್ಟೊಂದು ಸಮಸ್ಯೆಗಳಾದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಸಮರ್ಪಕವಾಗಿ ಹೆದ್ದಾರಿ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ.
ಮಳೆಗಾಲದ ಬಳಿಕವೂ ಎಚ್ಚೆತ್ತುಕೊಳ್ಳದ ಪ್ರಾಧಿಕಾರ
ಮಳೆಗಾಲದ ನಂತರವೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಹೊಳೆಬಾಗಿಲಿನಿಂದ ಮರಕುಟಕದವರೆಗೆ ಸಾಕಷ್ಟು ತಿರುವುಗಳಿದ್ದು, ಯಾವುದೇ ರೀತಿಯ ಘಲಕಗಳನ್ನು ಅಳವಡಿಸಿಲ್ಲ. ರಸ್ತೆಗಳಲ್ಲಿ ಒಳವೆಗಳಿದ್ದು, ಕಿರಿದಾದ ರಸ್ತೆಯಾಗಿರುವುದರಿಂದ ನಿತ್ಯ ಸಂಚಾರ ದಟ್ಟಣೆ ಆಗುತ್ತಿದೆ.
READ | ಮನೆಯಿಂದಲೇ ನಾಯಿ ಕಳವು, ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್
ಗುಂಡಿಯಲ್ಲಿ ರಸ್ತೆಯೋ, ರಸ್ತೆಯಲ್ಲಿ ಗುಂಡಿಯೋ…
ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಆದಾಗಿನಿಂದ ಸಮರ್ಪಕವಾಗಿ ನಿರ್ವಹಣೆ ಮಾಡಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂಬುವುದು ಸ್ಥಳೀಯರ ಆರೋಪವಾಗಿದೆ.
ಸಿಗಂದೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಸಂಚಾರದಟ್ಟಣೆ ಹೆಚ್ಚಿದೆ. ಇದರೊಂದಿಗೆ, ರಾತ್ರಿ ಹೊತ್ತಿನಲ್ಲಿ ಅಪಘಾತಗಳೂ ಸಂಭವಿಸುತ್ತಿವೆ.
ಹೊಸನಗರ ಮಾರ್ಗವಾಗಿ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪೂರ್ಣ ಹಾಳಾಗಿದೆ. ರಾತ್ರಿ ಹೊತ್ತಲ್ಲಿ ಸ್ವಂತ ವಾಹನದಲ್ಲಿ ಪ್ರಯಾಣಿಸಲು ಜೀವ ಕೈಯಲ್ಲಿ ಹಿಡಿದಿಟ್ಟುಕೊಳ್ಳಬೇಕು. ರಸ್ತೆಯಲ್ಲಿ ಗುಂಡಿ ಮತ್ತು ಬದಿಯಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ರಾತ್ರಿ ಹೊತ್ತಲ್ಲಿ ಸಂಚರಿಸುವುದು ಅಪಾಯಕ್ಕೆ ಆಹ್ವಾನಿಸುವಂತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು.
– ರಾಮು, ಬೆಂಗಳೂರು
ಟೆಂಡರ್ ಪೂರ್ಣಗೊಂಡರೂ ಕಾಮಗಾರಿ ಮುಗಿದಿಲ್ಲ
ಟೆಂಡರ್ ಪ್ರಕ್ರಿಯೆ ಮುಗಿದು ಒಂದು ವರ್ಷ ಗತಿಸಿದೆ. ಆದರೆ, ಇಲ್ಲಿಯವರೆಗೆ ಕಾಮಗಾರಿ ಆರಂಭಿಸಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರು ಸಹ ತುಟಿಪಿಟಕ್ ಎನ್ನುತ್ತಿಲ್ಲ.
ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಅರ್ಧ ಮುಗಿದರೂ ರಾಷ್ಟ್ರೀಯ ಹೆದ್ದಾರಿ ರಸ್ತೆ ಗುಂಡಿ, ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ನಿರಾಸಕ್ತಿ ತೋರುತ್ತಿರುವುದರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶಿವಮೊಗ್ಗ ಸಹಾಯಕ ಎಂಜಿನಿಯರ್ ನಿಂಗಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ‘ಸೋಮವಾರ ಗುತ್ತಿಗೆದಾರರ ಜೊತೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿರುವುದು ದುರದೃಷ್ಟಕರ. ಕೂಡಲೇ ಗುಂಡಿಗಳನ್ನು ಮುಚ್ಚಿ ನಿಯಮಾನುಸಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಿಗಂದೂರು ಭಕ್ತಾದಿಗಳು ಆಗ್ರಹಿಸಿದ್ದಾರೆ.
ವರದಿ | ಎಂ.ಸುಕುಮಾರ್
https://www.suddikanaja.com/2021/09/05/chitradurga-shivamogga-national-highway-work-started/