ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಜಿಲ್ಲೆಯ ನಾಲ್ಕು ಶಾಲೆ, ಒಂದು ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನ್ವಯ ಅವುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಾಗರ ತಾಲೂಕಿನ ಒಂದು ಸರ್ಕಾರಿ ಪ್ರೌಢ ಶಾಲೆ, ರಿಪ್ಪನ್ ಪೇಟೆಯ ಕಾಲೇಜು, ಶಿವಮೊಗ್ಗ ನಗರದ ಎರಡು ಖಾಸಗಿ ಶಾಲೆಗಳು, ಭದ್ರಾವತಿಯ ಒಂದು ಖಾಸಗಿ ಶಾಲೆಯಲ್ಲಿ ಕೊರೊನಾ ವೈರಾಣುವಿನ ಸೋಂಕು ಪತ್ತೆಯಾಗಿರುವುದರಿಂದ ಇವುಗಳಿಗೆ ರಜೆ ಘೋಷಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 30ಕ್ಕೂ ಅಧಿಕ ಮಕ್ಕಳಿಗೆ, 13 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೇರಳಾಕ್ಕೆ ಹೋಗಿ ಬಂದಿರುವ ಗಾಜನೂರು ನವೋದಯ ಶಾಲೆ ಪ್ರಾಚಾರ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಸೂಚನೆ ನೀಡಲಾಗಿದೆ. ಮಕರ ಸಂಕ್ರಾಂತಿ ವೇಳೆಯಲ್ಲಿ ಒಂದು ವಾರ ಈ ಶಾಲೆಗೆ ರಜೆ ಘೋಷಣೆ ಮಾಡಲಾಗುತ್ತದೆ. ಹೀಗಾಗಿ, ಜ.18ರ ವರೆಗೆ ಶಾಲೆಗೆ ರಜೆ ನೀಡಲಾಗಿದೆ.
ಸೊರಬದ ತಾಂತ್ರಿಕ ವಿದ್ಯಾಲಯದಲ್ಲೂ ಪಾಸಿಟಿವ್
ತಾಂತ್ರಿಕ ವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ, ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ಅದೇ ರೀತಿ, ರಿಪ್ಪನ್ಪೇಟೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಂಕು ಪತ್ತೆಯಾಗಿದೆ. ರೋಗದ ಲಕ್ಷಣಗಳು ಇದ್ದ ಕಾರಣದಿಂದಾಗಿ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಪಾಸಿಟಿವ್ ಬಂದಿದೆ.
https://www.suddikanaja.com/2021/11/24/sagar-taluk-yadehalli-indira-gandhi-hostel-students-protest-against-principal/