ಸಕ್ರೆಬೈಲಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಆರಂಭ, ಏನೆಲ್ಲ‌ ಇರಲಿದೆ, ಯಾವಾಗಿಂದ‌ ಲಭ್ಯ?

 

ಸುದ್ದಿ ಕಣಜ.ಕಾಂ | DISTRICT | SHIVAMOGGA TOURISM
ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದಲ್ಲಿ ಇನ್ಮುಂದೆ ಪ್ರವಾಸಿಗರು ಆನೆಗಳನ್ನು ವೀಕ್ಷಿಸುವುದು‌ ಮಾತ್ರವಲ್ಲ, ತುಂಗಾ ಹಿನ್ನೀರಿನಲ್ಲಿ ಬೋಟಿಂಗ್ ಸ್ಪೋರ್ಟ್ಸ್ ಕೂಡ ಆಡಬಹುದು.
ಜುಲೈ 1ರಿಂದ ಇದು ಲಭ್ಯವಾಗಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರು ಇದಕ್ಕೆ‌ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ರಸ್ತೆ, ರೈಲು, ವಿಮಾನ ಸಂಚಾರ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ, ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಅದಕ್ಕೆ ಪೂರಕವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿಚ್ಚಿಸುವ ಪ್ರವಾಸಿಗರಿಗೆ ವಿಶೇಷವಾಗಿ ಜಲಕ್ರೀಡೆ ಮತ್ತು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗಾಗಿ ಬೋಟಿಂಗ್ ಸ್ಪೋರ್ಟ್ಸ್ ಆರಂಭಿಸಲಾಗುತ್ತಿದೆ ಎಂದು ರಾಜ್ಯ ಜಂಗಲ್ ರೆಸಾರ್ಟ್ ನಿಗಮದ ಸದಸ್ಯ ರಾಜೇಶ್ ಕಾಮತ್ ತಿಳಿಸಿದ್ದಾರೆ.
ಜಂಗಲ್ ರೆಸಾರ್ಟ್ ನಿಗಮದ ವತಿಯಿಂದ ಜಲಕ್ರೀಡೆ ಹಾಗೂ ಸಾಹಸ ಚಟುವಟಿಕೆಗಳ ಕ್ರೀಡಾ ಕೇಂದ್ರವನ್ನು ರಾಘವೇಂದ್ರ ಅವರು ಜುಲೈ 1ರಂದು ಬೆಳಗ್ಗೆ ‌ 9 ಗಂಟೆಗೆ ಉದ್ಘಾಟನೆ ಮಾಡುತಿದ್ದು, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್, ಜಂಗಲ್ ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್, ಸಕ್ರೆಬೈಲಿನ ವ್ಯವಸ್ಥಾಪಕ ಎ.ಪಿ.ಕಿರಣ್ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಭಾಗವಹಿಸಲಿದ್ದಾರೆ.
ಏನೇನು ಲಭ್ಯ?
ಸಕ್ರೆಬೈಲಿನ ಆನೆಗಳ ಬಿಡಾರದ ಜೊತೆಗೆ ಇಲ್ಲಿನ ಹಿನ್ನೀರಿನ ವಿಹಂಗಮ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲ ಜಲಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿನ ಸುಂದರ ವಾತಾವರಣ ಮನಮೋಹಕವಾಗಿದ್ದು, ಪ್ರವಾಸಿಗರನ್ನು ಸಂತಸಪಡಿಸಲಿದೆ. ಇಲ್ಲಿನ ಶುದ್ಧ ಗಾಳಿ, ನೀರು, ಅಷ್ಟಾಗಿ ಇರದ ಜನಜಂಗುಳಿ ವಾತಾವರಣ ಇದೆಲ್ಲವೂ ಪ್ರವಾಸಿಗರನ್ನು ಆಕರ್ಷಿಸಲಿದೆ.
ಹೊಸದಾಗಿ ಆರಂಭಿಸಲಾಗುತ್ತಿರುವ ಈ ಬೋಟಿಂಗ್ ಸ್ಪೋರ್ಟ್ಸ್ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿರಲಿದೆ. ಮುಂದಿನ ದಿನಗಳಲ್ಲಿ ಸ್ವಯಂ ಹುಟ್ಟು ಹಾಕುತ್ತಾ ಬೋಟಿಂಗ್ ಮಾಡುವುದು, ರ‌್ಯಾಫ್ಟಿಂಗ್, ಪೆಡಲಿಂಗ್‌ ಕೂಡ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಜಂಗಲ್ ರೆಸಾರ್ಟ್ ನಲ್ಲಿ ತಂಗುವವರು ಮಾತ್ರವಲ್ಲದೇ ಸಾರ್ವಜನಿಕರಿಗೂ ಅವಕಾಶ ಮುಕ್ತವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕುಟುಂಬದ ಸದಸ್ಯರೊಂದಿಗೆ ಈ ಜಲಕ್ರೀಡೆಯ ಸವಿಯನ್ನು ಸವಿದು ಸಂಭ್ರಮಿಸುವಂತೆ ಅವರು ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಉಪ ಕಚೇರಿ ಆರಂಭಕ್ಕೆ ಒತ್ತಾಯ

Leave a Reply

Your email address will not be published.