ಸುದ್ದಿ ಕಣಜ.ಕಾಂ | DISTRICT | HAR GHAR TIRANGA
ಶಿವಮೊಗ್ಗ: ಜಿಲ್ಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ ಯಶಸ್ವಿಗೆ ಜಿಲ್ಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮನೆಗಳ ಮೇಲೆ ತ್ರಿವರ್ಣ ಧ್ಜಜವನ್ನು ಹಾರಿಸಲು ಸಿದ್ಧತೆಗಳನ್ನು ಮಾಡಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್.ಆರ್.ಎಲ್.ಎಂ) ಯೋಜನೆಯಡಿ ಸ್ವಸಹಾಯ ಸಂಘಗಳ ಸದಸ್ಯರು ಸ್ಥಳೀಯವಾಗಿ ಈ ಧ್ವಜಗಳನ್ನು ಸಿದ್ಧಪಡಿಸಿರುವುದು ವಿಶೇಷವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
1.09 ಲಕ್ಷ ಧ್ವಜ ಸಿದ್ಧ
ಗ್ರಾಮ ಪಂಚಾಯಿತಿಗಳಿಗೆ ಪೂರೈಕೆ ಮಾಡಲು ಶಿವಮೊಗ್ಗ ತಾಲೂಕಿನಲ್ಲಿ 16,700, ಭದ್ರಾವತಿ ತಾಲೂಕು 17500, ತೀರ್ಥಹಳ್ಳಿ 15000, ಹೊಸನಗರ 15000, ಸಾಗರ 12000, ಸೊರಬ 14000 ಮತ್ತು ಶಿಕಾರಿಪುರ ತಾಲೂಕಿನಲ್ಲಿ 19000 ಒಟ್ಟು 1,09,200 ಧ್ವಜಗಳನ್ನು ಸಿದ್ಧಪಡಿಸಲಾಗಿದೆ.
READ | ಮನೆಗೆ ಕನ್ನ ಹಾಕಿದ ಇಬ್ಬರ ಬಂಧನ, ಲಕ್ಷಾಂತರ ಮೌಲ್ಯದ ಆಭರಣಗಳು ಸೀಜ್
11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಭೆ ನಡೆಸಿ
ಇದಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 80000 ತ್ರಿವರ್ಣ ಧ್ವಜಗಳನ್ನು ಪೂರೈಕೆ ಮಾಡಲಾಗಿದೆ. ಅಭಿಯಾನದ ಯಶಸ್ವಿಗೆ ಜಿಲ್ಲೆಯ ಎಲ್ಲ 11 ನಗರ ಸ್ಥಳೀಯ ಸಂಸ್ಥೆಗಳು ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿವೆ. ಜನಪ್ರತಿನಿಧಿಗಳು, ಸ್ವಸಹಾಯ ಸಂಘಗಳು, ವಿವಿಧ ಸಂಘ ಸಂಸ್ಥೆಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಿವೆ. ತ್ರಿವರ್ಣ ಧ್ವಜಕ್ಕೆ ತಲಾ 22000 ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳಿಂದ ಧ್ವಜವನ್ನು ಖರೀದಿಸಿ ಸ್ವಯಂ ಪ್ರೇರಣೆಯಿಂದ ತಮ್ಮ ಮನೆಗಳ ಮೇಲೆ ಪ್ರದರ್ಶಿಸಲು ಕೋರಲಾಗಿದೆ ಎಂದರು.
ಹರ್ ಘರ್ ತಿರಂಗ್ ಅಭಿಯಾನದ ಅಡಿಯಲ್ಲಿ ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯ ಎಲ್ಲ ಮನೆ, ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಸಿದ್ಧತೆ ಮಾಡಲಾಗಿದೆ.
| ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಇಬ್ಬರು ನೋಡಲ್ ಅಧಿಕಾರಿಗಳ ನೇಮಕ
ಜಿಲ್ಲೆಯಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ನೆರವೇರಿಸಲು ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯವಸ್ಥಿತವಾಗಿ ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರೇರಣೆ ನೀಡುವ ಕಾರ್ಯ ಮಾಡಲಾಗಿದೆ ಎಂದರು.
ಸಾರ್ವಜನಿಕರು ತ್ರಿವರ್ಣ ಧ್ವಜದ ಶಿಷ್ಟಾಚಾರಕ್ಕೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಆಗಸ್ಟ್ 13ರಂದು ಹಾರಿಸಿದ ಬಾವುಟವನ್ನು ಪ್ರತಿದಿನ ಇಳಿಸುವ ಅಗತ್ಯವಿಲ್ಲ. ಹಾನಿಗೀಡಾದ ಧ್ವಜವನ್ನು ಮಾರಾಟ ಮಾಡಬಾರದು ಎಂದು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಯೋಜನಾ ನಿರ್ದೇಶಕ ಕರಿಭೀಮಣ್ಣ ಮೂಕಪ್ಪನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.
https://suddikanaja.com/2022/03/03/dc-r-selvamani-said-the-video-on-wheels-campaign-will-be-held-across-the-shivamogga-district-from-march-6/