ಸುದ್ದಿ ಕಣಜ.ಕಾಂ | SHIMOGA CITY | 28 OCT 2022
ಶಿವಮೊಗ್ಗ(Shivamogga): ಹಲವು ವಿವಾದಗಳ ನಂತರ ಕೊನೆಗೂ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ ಪ್ರಕ್ರಿಯೆ ಆರಂಭಗೊಂಡಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್’ನಿಂದ ಮಲವಗೊಪ್ಪ ವಾರ್ಡ್ ಪಾಲಿಕೆ ಸದಸ್ಯ ಆರ್.ಸಿ.ನಾಯ್ಕ್ (RC Naik) ಹಾಗೂ ಉಪ ಮೇಯರ್ ಸ್ಥಾನಕ್ಕೆ ಹೊಸಮನೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ನಾಮಪತ್ರವನ್ನು ಸಲ್ಲಿಸಿದ್ದಾರೆ.
READ | ಇಂದು ನಡೆಯಲಿದೆ ಶಿವಮೊಗ್ಗ ಮೇಯರ್, ಉಪ ಮೇಯರ್ ಎಲೆಕ್ಷನ್, ಏನೆಲ್ಲ ನಡೆಯಲಿದೆ?
ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದು, ಮಧ್ಯಾಹ್ನ 12 ಗಂಟೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿತ್ತು. ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಎಚ್.ಸಿ.ಯೋಗೇಶ್, ಯಮುನಾ ರಂಗೇಗೌಡ, ಜೆಡಿಸ್ ನ ನಾಗರಾಜ್ ಕಂಕಾರಿ ಇತರರು ಉಪಸ್ಥಿತರಿದ್ದರು.
ಬಸ್ಸಿನಲ್ಲಿ ಎಂಟ್ರಿ ಕೊಟ್ಟ ಬಿಜೆಪಿ ಕಾರ್ಪೋರೇಟರ್
ಬಿಜೆಪಿ ಪಕ್ಷದ ಮಹಾನಗರ ಪಾಲಿಕೆ ಸದಸ್ಯರು ಒಂದೇ ಬಸ್ಸಿನಲ್ಲಿ ಪಾಲಿಕೆಗೆ ಆಗಮಿಸಿ ಪಕ್ಷದ ಪರ ಘೋಷಣೆಗಳನ್ನು ಕೂಗುತ್ತಾ ನಾಮಪತ್ರ ಸಲ್ಲಿಸಿದರು. ಒಂದೇ ಬಸ್ಸಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದರು. ಉಪ ಮೇಯರ್ ಸ್ಥಾನಕ್ಕೆ ಮೂರ್ನಾಲ್ಕು ಜನರ ಹೆಸರು ಕೇಳಿ ಬರುತ್ತಿದ್ದರೂ ಪಕ್ಷದ ಮಧ್ಯಸ್ಥಿಕೆಯಲ್ಲಿ ಲಕ್ಷ್ಮೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಗುರುಪುರ-ಪುರ್ಲೆ ವಾರ್ಡಿನ ಶಿವಕುಮಾರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ನ್ಯೂ ಮಂಡ್ಲಿ ವಾರ್ಡಿನ ಲಕ್ಷ್ಮೀ ಶಂಕರನಾಯ್ಕ್ ನಾಮಪತ್ರ ಸಲ್ಲಿಸಿದರು.
READ | ಹೈನುಗಾರರಿಗೆ ಗುಡ್ ನ್ಯೂಸ್, ಕನ್ನಡ ರಾಜ್ಯೋತ್ಸವಕ್ಕೆ ಶಿಮುಲ್ ಕೊಡುಗೆ
ಕೈ ಎತ್ತುವ ಮೂಲಕ ಮತದಾನ
ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಮಧ್ಯಾಹ್ನ 3 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾಲಿಕೆ ಚುನಾವಣಾ ಸಭೆ ಆರಂಭಗೊಂಡಿದೆ. ಮಧ್ಯಾಹ್ನ 3ರ ನಂತರ ನಾಮಪತ್ರ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ ಇತ್ಯಾದಿ ಪ್ರಕ್ರಿಯೆ ನಡೆಯಲಿವೆ.
ಎರಡೂ ಪಕ್ಷಗಳಿಂದ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ನಾಮಪತ್ರ ಹಿಂತೆಗತದ ಪ್ರಶ್ನೆಯೇ ಬರುವುದಿಲ್ಲ. ಹೀಗಾಗಿ, ಕೈ ಎತ್ತುವ ಮೂಲಕ ಮತದಾನ ಹಾಗೂ ಸದಸ್ಯರ ಸಹಿ ದಾಖಲಿಸುವುದು. ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಿಸಲಾಗುವುದು. ಮಹಾಪೌರರ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪ ಮಹಾಪೌರರ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲಾತಿ ನೀಡಲಾಗಿದೆ.
https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/