ಸುದ್ದಿ ಕಣಜ.ಕಾಂ | SHIVAMOGGA NEWS
ಶಿವಮೊಗ್ಗ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯು ನವೆಂಬರ್ 6ರಂದು ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr. R.Selvamani) ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಸಂಬಂಧ ನಿಯೋಜಿತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ನಿಷೇಧಿತ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
| ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಬೆಳಗ್ಗೆ 9.30ರಿಂದ ಸಂಜೆಯವರೆಗೆ ಪರೀಕ್ಷೆ
ನ.6ರಂದು ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 9.30 ರಿಂದ 12 ಗಂಟೆವರೆಗೆ ಪೇಪರ್ 1 ಮತ್ತು ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ಪೇಪರ್ 2 ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರದ ಆವರಣದೊಳಗೆ ಅಭ್ಯರ್ಥಿಗಳ ಪ್ರವೇಶ, ಬೆಲ್ ಆಗುವ ಸಮಯ, ನಿಗದಿತ ವೇಳಾಪಟ್ಟಿಯಂತೆ ಮತ್ತು ಮಾರ್ಗಸೂಚಿಯನ್ವಯ ಪರೀಕ್ಷೆಯನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
READ | ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗ ಭೇಟಿ ನಾಳೆ, ಜನರೊಂದಿಗೆ ನಡೆಸಲಿದ್ದಾರೆ ಸಭೆ, ಏನೆಲ್ಲ ದೂರುಗಳನ್ನು ಸಲ್ಲಿಸಬಹುದು?
ಪರೀಕ್ಷೆ ನಡೆಸುವುದಕ್ಕಾಗಿ ಡಿಸಿ ನೀಡಿದ ಸೂಚನೆಗಳಿವು
- ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸಬೇಕು. ಒಂದು ಶಾಲೆಯ ಅಧಿಕಾರಿಗಳನ್ನು ಅದೇ ಶಾಲೆಗೆ ನಿಯೋಜಿಸದೆ, ಬೇರೆ ಶಾಲೆಗಳಿಗೆ ಮೇಲ್ವಿಚಾರಕರು, ಕೇಂದ್ರ ಅಧೀಕ್ಷಕರು, ಸಿಟ್ಟಿಂಗ್ ಸ್ಕ್ವಾಡ್ ಆಗಿ ನೇಮಿಸಬೇಕು.
- ಯಾವುದೇ ರೀತಿಯ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಚ್’ಗಳನ್ನು ಪ್ರವೇಶ ಕೇಂದ್ರಗಳೊಳಗೆ ನಿಬರ್ಂಧಿಸಬೇಕು.
- ಸೂಕ್ತವಾದ ಆಸನ ವ್ಯವಸ್ಥೆ, ವಿಕಲಚೇತನರಿಗೆ ನೆಲಮಹಡಿಯಲ್ಲಿ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಪೂರ್ವಭಾವಿಯಾಗಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ತೆರಳಿ, ಆಸನ ವ್ಯವಸ್ಥೆ, ಸಿಸಿ ಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು.
- ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಸಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಮಾರ್ಗಾಧಿಕಾರಿಗಳು ಪಡೆದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಸರಬರಾಜು ಮಾಡಲು ಪ್ರತಿ ಮಾರ್ಗಕ್ಕೆ ಒಬ್ಬರಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು.
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ
ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರಗಳಿಗೆ, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಸಿಆರ್.ಪಿಸಿ ಕಲಂ 144 ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್’ವರೆಗೆ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.
READ | ಬೇಕರಿ, ಹೋಟೆಲ್ ಮಾಲೀಕರೇ ಎಚ್ಚರ! ಇದು ಫೇಕ್ ಫುಡ್ ಆಫಿಸರ್ ಕಥೆ
ಡಿ.ಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಪರೀಕ್ಷೆಗೆ ಸಂಬಂಧಿಸಿದಂತೆ ಮೇಲ್ವಿಚಾರಕರು, ಕೇಂದ್ರ ಅಧೀಕ್ಷಕರು, ಸಿಟ್ಟಿಂಗ್ ಸ್ಕ್ವಾಡ್, ಮಾರ್ಗಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿ, ಸಿಬ್ಬಂದಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿವರಿಸಿದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಬಸವರಾಜಪ್ಪ, ಬಿಇಓ ನಾಗರಾಜ್, ಜಿಲ್ಲಾ ಖಜಾನಾಧಿಕಾರಿ ಎಸ್.ಎಚ್.ಸಾವಿತ್ರಿ, ಪೊಲೀಸ್ ಇಲಾಖೆ ಅಧಿಕಾರಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಉಪ ಪ್ರಾಚಾರ್ಯರು, ಸಿಬ್ಬಂದಿ ಹಾಜರಿದ್ದರು.
https://suddikanaja.com/2022/09/07/kannada-name-boards-must-be-put-on-all-the-shops-under-the-jurisdiction-of-shivamogga-corporation-kannada-development-authority-president-ts-nagabharana-istruct/