ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮೆಸ್ಕಾಂನಲ್ಲಿ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ಬಳಕೆಯಾಗದೆ ಬಿಡುಗಡೆಯಾಗಿರುವ ಅನುದಾನ ಹಾಗೆಯೇ ಉಳಿದಿರುವುದು ಗಮನಕ್ಕೆ ಬಂದಿದೆ. ಆ ಅನುದಾನವನ್ನು ಸಕಾಲದಲ್ಲಿ ಉದ್ದೇಶಿತ ಯೋಜನೆಗಳ ಅನುಷ್ಠಾನಕ್ಕೆ ಬಳಸಲು ಅನುಕೂಲವಾಗುವಂತೆ ಅನುಮತಿ ನೀಡಲು ಕೋರಿ ಮೆಸ್ಕಾಂ ಆಯುಕ್ತರಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಸೂಚಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗಾಗಿ ಹಲವು ಯೋಜನೆಗಳಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಬಳಕೆ ಕುರಿತು ಗುರುವಾರ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಹಲವು ಯೋಜನೆಗಳಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಚಟುವಟಿಕೆಗಳಿಗಾಗಿಯೇ ಮಂಜೂರಾಗುವ ಅನುದಾವನ್ನು ಉದ್ದೇಶಿತ ಕಾರ್ಯಕ್ರಮಗಳಿಗಾಗಿಯೇ ಸಕಾಲದಲ್ಲಿ ಬಳಸಿ, ವರದಿ ನೀಡುವಂತೆ ಹೇಳಿದರು.
READ | ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಸ್ತಾವನೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಡಿಸಿ ಅಧಿಕಾರಿಗಳಿಗೆ ನೀಡಿದ ಸೂಚನೆಗಳೇನು?
- ಕೆಲವು ತಿಂಗಳುಗಳಲ್ಲಿ ಚುನಾವಣೆ ಘೋಷಣೆ ಆಗಬಹುದಾದ ಸಾಧ್ಯತೆಗಳಿರುವುದರಿಂದ ಅನಗತ್ಯ ವಿಳಂಬ ಮಾಡದೆ ಬಿಡುಗಡೆಯಾಗಿರುವ ಅನುದಾನವನ್ನು ಉದ್ದೇಶಿತ ಕಾರ್ಯಗಳಿಗಾಗಿ ಬಳಸಬೇಕು.
- ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ದುರಸ್ತಿ ಮುಂತಾದ ಕೆಲವು ಯೋಜನೆಗಳಡಿಯಲ್ಲಿ ಫಲಾನುಭವಿಗಳಿಲ್ಲದ ನೆಪ ಹೇಳಿ ಅನುದಾನ ಬಳಸದಿರುವ ಬಗ್ಗೆ ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈವರೆಗೆ ಅನುದಾನ ಬಳಕೆ ಮಾಡದಿರುವ ಇಲಾಖೆಗಳನ್ನು ಗುರುತಿಸಿ ಅವುಗಳ ಪ್ರಗತಿ ಪರಿಶೀಲಿಸಿ ವರದಿ ಸಲ್ಲಿಸಿ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
- ಕೆಲವು ಇಲಾಖೆಗಳ ಆರ್ಥಿಕ ಪ್ರಗತಿ ತೃಪ್ತಿದಾಯಕವಾಗಿದೆ. ಇನ್ನೂ ಕೆಲವು ಇಲಾಖೆಗಳ ಪ್ರಗತಿ ನಿರಾಶಾದಾಯಕವಾಗಿದೆ. ಕೆಲವು ಕಾರಣಗಳಿಂದ ಅನುದಾನ ಬಳಕೆ ಮಾಡದೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಅಧಿಕಾರಿಗಳು 2023ರ ಜನವರಿ ಮಾಸಾಂತ್ಯದೊಳಗಾಗಿ ಬಳಸಿ ವರದಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ನಗರ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಜಯಲಕ್ಷ್ಮಮ್ಮ, ನಂದಿನಿ, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ಗಣೇಶ್, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
https://suddikanaja.com/2022/12/01/cm-basavaraj-bommai-reaction-on-muslim-girls-college/