ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದ ಬೆನ್ನಲ್ಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಇದಾದ ಬೆನ್ನಲ್ಲೇ ನಗರ ಸುತ್ತಮುತ್ತಲಿನ ವಸತಿ ಶಾಲೆ ಮತ್ತು ಕೆಲವು ಹಾಸ್ಟೆಲ್ ವಿದ್ಯಾರ್ಥಿಗಳಲ್ಲೂ ವಾಂತಿ ಕಾಣಿಸಿಕೊಂಡಿದೆ. ಇದುವರೆಗೆ ಸುಮಾರು 125 ವಿದ್ಯಾರ್ಥಿಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಸಂಜೆಯಿಂದ ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಗುತ್ತಿದ್ದು, ಮಂಗಳವಾರ ಮಧ್ಯಾಹ್ನದವರೆಗೆ ಒಟ್ಟು 125 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 50 ಮಕ್ಕಳು ಚಿಕಿತ್ಸೆ ಪಡೆದು ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
READ | ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ, ಒಂದೇ ಕುಟುಂಬದ ಮೂವರು ವಿಷ ಕುಡಿದು ಸಾವು
ಸೋಮವಾರ ಸಂಜೆಯಿಂದ ಹೊಟ್ಟೆ ನೋವು
- ಮೇಲಿನ ಹನಸವಾಡಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 60 ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಾಂತಿ ಆರಂಭವಾಗಿದ್ದೇ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಗೆ ಕರೆತರಲಾಗಿದೆ. ಆಗ ಆಹಾರ ಅಥವಾ ನೀರಿನ ಸಮಸ್ಯೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿರಬಹುದು ಎಂದು ಶಂಕಿಸಲಾಗಿತ್ತು.
- ಅದೇ ದಿನ ಮಧ್ಯರಾತ್ರಿಯ ಹೊತ್ತಿಗೆ ಬೇರೆಯ ವಸತಿ ಶಾಲೆಯ ಮಕ್ಕಳಲ್ಲೂ ಇದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಿದರು.
- 24 ಗಂಟೆಯೊಳಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ, ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
- ಮೆಗ್ಗಾನ್ ಆಸ್ಪತ್ರೆಗೆ ಅಸ್ವಸ್ಥ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸುವುದಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಡಿ.ಪ್ರಕಾಶ್ ಭೇಟಿ ನೀಡಿದರು.
- ಏಕಾಏಕಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಈ ಬಗ್ಗೆ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ಮಾಡಲಾಯಿತು.
https://suddikanaja.com/2023/01/05/shivamogga-city-bus-stand-dc-dr-r-selvamani-order/