
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆರ್.ಎಂ.ಮಂಜುನಾಥ್ ಗೌಡ (RM Manjunathgowda) ಅವರ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ನಿರ್ದೇಶಕ ಸ್ಥಾನ ರದ್ದತಿ ಆದೇಶವನ್ನು ವಜಾಗೊಳಿಸಿ ಸಹಕಾರ ಸಂಘಗಳ ಅಪರ ನಿಬಂಧಕರು ತೀರ್ಪು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಮಂಜುನಾಥ್ ಗೌಡ ಅವರು ಬುಧವಾರ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಗೆ ಭೇಟಿ ನೀಡಿ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶದ ಪ್ರತಿಯನ್ನು ಸಲ್ಲಿಸಿದರು.

ನಾನು ಅಧ್ಯಕ್ಷನಾಗಿದ್ದಾಗಲೇ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಹಾಗಾಗಿ ಅಧ್ಯಕ್ಷರ ಚುನಾವಣೆಯೂ ನಡೆದಿತ್ತು. ಈಗ ನಿರ್ದೇಶಕ ಸ್ಥಾನವನ್ನೇ ಮತ್ತೆ ಊರ್ಜಿತಗೊಳಿಸಿದ್ದರಿಂದ ಸಹಜವಾಗಿಯೇ ನಾನು ಅಧ್ಯಕ್ಷನಾಗಿ ಮುಂದುವರಿಯುವ ಅವಕಾಶವಿದೆ.
– ಆರ್.ಎಂ.ಮಂಜುನಾಥ್ ಗೌಡ, ಕಾಂಗ್ರೆಸ್ ಮುಖಂಡ
ಏನಿದು ಪ್ರಕರಣ, ಏಕೆ ನಿರ್ದೇಶಕ ಸ್ಥಾನ ರದ್ದಾಗಿತ್ತು?
ಮಂಜುನಾಥ್ ಗೌಡ ಅವರನ್ನು ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸ್ಥಾನವನ್ನು ರದ್ದುಗೊಳಿಸಿ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಆದೇಶಿಸಿದ್ದರು.
READ | ಎರಡನೇ ಪ್ರಯತ್ನದಲ್ಲೇ ಶಿವಮೊಗ್ಗದ ಐ.ಎನ್.ಮೇಘನಾ ಯುಪಿಎಸ್.ಸಿ ಪಾಸ್, ಯಶಸ್ಸಿನ ಗುಟ್ಟೇನು?
ಆರು ವರ್ಷಗಳ ಹಿಂದೆ ನಡೆದಿದ್ದ ಡಿಸಿಸಿ ಬ್ಯಾಂಕಿನ ಗಾಂಧಿ ಬಜಾರ್ ಶಾಖೆಯಲ್ಲಿ ನಕಲಿ ಚಿನ್ನ ಅಡಮಾನದ ₹65 ಕೋಟಿ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಆರ್.ಎಂ ಮಂಜುನಾಥ್ ಗೌಡ ಅವರನ್ನು ಜಂಟಿ ಸಹಕಾರ ನಿಬಂಧಕರ ನ್ಯಾಯಾಲಯ ಬ್ಯಾಂಕ್ ನ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಸೂಚನೆಯಂತೆ ಮಂಜುನಾಥ್ ಗೌಡರು ಅಪರ ಸಹಕಾರ ನಿಬಂಧಕರ ನ್ಯಾಯಾಲಯದಲ್ಲಿ ಅಫೀಲು ಸಲ್ಲಿಸಿದ್ದು ಇದೀಗ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಜಂಟಿ ನಿಬಂಧಕರ ಆದೇಶವನ್ನು ರದ್ದು ಗೊಳಿಸಿ. ಮಂಜುನಾಥ್ ಗೌಡರು ನಿರ್ದೇಶಕರಾಗಿ ಮುಂದುವರಿಯಲು ಆದೇಶಿಸಿದೆ. ಈ ತೀರ್ಪಿನಿಂದ ಮಂಜುನಾಥ್ ಗೌಡ ಅವರಿಗೆ ಮತ್ತೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ದಕ್ಕಿದಂತಾಗಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎನ್ ಸುಧೀರ್, ಷಡಾಕ್ಷರಿ, ದುಗ್ಗಪ್ಪಗೌಡ, ಪರಮೇಶ್ವರ್, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಜಗದೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಇದ್ದರು.
ರಾಜಕಾರಣಕ್ಕಾಗಿ ಪಿತೂರಿ
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ್ ಗೌಡ, ಕಳೆದ 40 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಇದ್ದೇನೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಡಿಸಿಸಿ ಬ್ಯಾಂಕ್ ಕಷ್ಟದಲ್ಲಿದ್ದಾಗ ಅದನ್ನು ಕಟ್ಟಿ ಬೆಳೆಸಿದ್ದೇನೆ. ಹೀಗಿದ್ದರೂ ಕೇವಲ ರಾಜಕಾರಣಕ್ಕಾಗಿ ನನ್ನ ವಿರುದ್ಧ ಪಿತೂರಿ ಮಾಡಿ ನಿರ್ದೇಶಕ ಸ್ಥಾನದಿಂದ ಅನರ್ಹತೆಗೊಳಿಸಲು ಹಲವರು ಮುಂದಾಗಿದ್ದರು. ಒಮ್ಮೆ ಎಂಟು ಸದಸ್ಯರನ್ನು ಅನರ್ಹಗೊಳಿಸಿದ್ದರು. ನಂತರ ನನ್ನೊಬ್ಬನನ್ನೇ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠದ ಮೆಟ್ಟಿಲೇರಿದ್ದೆ. ಪೀಠವು ಆರು ವಾರದಲ್ಲಿ ವಿಚಾರಣೆ ನಡೆಸಿ ಸಹಕಾರ ನಿಬಂಧಕರ ಕಚೇರಿಗೆ ಸೂಚನೆ ನೀಡಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಅದರ ಅನ್ವಯ ಸಹಕಾರ ಸಂಘಗಳ ಅಪರ ನಿಬಂಧಕರು ವಿಚಾರಣೆ ನಡೆಸಿ ಕೆಳಗಿನ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಯುವಂತೆ ಆದೇಶ ನೀಡಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದರು.