DC Meeting | ಶಾಹಿ ಎಕ್ಸ್ ಪೋರ್ಟ್ ವಿರುದ್ಧ ಕೇಸ್ ದಾಖಲಿಸಲು ಸೂಚನೆ, ಕಾರಣವೇನು?

Industry Meeting

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಿದಿಗೆ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಪ್ರೈ.ಲಿ. ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ 187ನೇ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಶಾಹಿ ಎಕ್ಸ್ ಪೋರ್ಟ್ ಪ್ರೈ.ಲಿ.ನಿಂದ ಮಾಲಿನ್ಯ ಉಂಟಾಗುತ್ತಿದ್ದು ಕೈಗಾರಿಕಾ ಪ್ರದೇಶದ ಘಟಕಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (Polution control Board)ಯವರು ಈಗಾಗಲೇ ನೋಟಿಸ್ ನೀಡಿರುತ್ತಾರೆ. ಆದರೂ ಮಾಲಿನ್ಯ ನಿಯಂತ್ರಣವಾಗಿಲ್ಲದ ಕಾರಣ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಮಾಲಿನ್ಯ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಡಾ.ಆರ್.ಸೆಲ್ವಮಣಿ, “ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯಗಳನ್ನು ಒದಗಿಸಬೇಕು” ಎಂದು ತಿಳಿಸಿದರು.

READ | ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಎಂಟು ಕಡೆ ಲೋಕಾಯುಕ್ತ ದಾಳಿ,‌ ಕಾರಣವೇನು?

ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿದ್ದೇನು?

  • ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 150 ಪ್ಲಾಟ್‍ಗಳಿದ್ದು, ಇದಕ್ಕೆ ಸರಿಹೊಂದುವಂತೆ ಸಬ್ ಸ್ಟೇಷನ್ ನಿರ್ಮಿಸುವ ಸಂಬಂಧ ಮೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ಲೈನ್ ಅಸೆಸ್‍ಮೆಂಟ್ ಮಾಡಿ ಒಂದು ವಾರದ ಒಳಗೆ ವರದಿ ನೀಡಬೇಕು.
  • ನಿಸ್ತೇಜಗೊಂಡ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವೈಜ್ಞಾನಿಕವಾಗಿ ಇ-ತ್ಯಾಜ್ಯ ನಿರ್ವಹಣೆಗಾಗಿ ಹಾಗೂ ಇ-ಮಾಲಿನ್ಯ ತಡೆಗಾಗಿ ನಗರದ ಹೊರವಲಯದಲ್ಲಿ 5 ಎಕರೆಯಷ್ಟು ಜಮೀನನ್ನು ಗುರುತಿಸಿ, ಅದನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಲೀಸ್ ಆಧಾರದಲ್ಲಿ ನೀಡಲು ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಇಇಗೆ ಸೂಚನೆ.
  • ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶಕ್ಕೆ ಗ್ರಾಮೀಣ ನೀರು ಸರಬರಾಜು ಯೋಜನೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಒದಗಿಸಲು ಯೋಜನೆ ರೂಪಿಸಲಾಗಿದ್ದು, ಈ ಕುರಿತಾದ ಡಿಪಿಆರ್ ತಾಂತ್ರಿಕ ಪರಿಶೀಲನೆ ಹಂತದಲ್ಲಿದೆ.
  • ಸೋಗಾನೆ ಕೈಗಾರಿಕಾ ಪ್ರದೇಶ ಅಭಿವೃದ್ದಿಪಡಿಸುವ ಸಂಬಂಧ ಅನಧಿಕೃತ ಸಾಗುವಳಿ, ಜಮೀನು ಹಸ್ತಾಂತರ, ಕೋರ್ಟ್ ಪ್ರಕರಣಗಳು ಇತರೆ ಸಮಸ್ಯೆಗಳಿದ್ದು ಇದನ್ನು ಸರಿಪಡಿಸಲು ಎಸಿ, ತಹಶೀಲ್ದಾರ್, ಎಸ್‍ಎಲ್‍ಎಓ, ಕೆಐಎಡಿಬಿ ಅಧಿಕಾರಿ ಇತರರ ಒಂದು ಸಮಿತಿ ರಚಿಸಿ ಕ್ರಮ ವಹಿಸಲಾಗುವುದು.

ಆಟೋ ಕಾಂಪ್ಲೆಕ್ಸ್’ನಲ್ಲಿ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಿ
ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಮಾತನಾಡಿ ಆಟೋ ಕಾಂಪ್ಲೆಕ್ಸ್ ಬಳಿ ವಾಹನ ಸಂದಣಿ ಹೆಚ್ಚಿದೆ. ಹಾಗೂ ಶೌಚಾಲಯದ ಅಗತ್ಯವಿದೆ ಎಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, “ತಾವು ಪಾಲಿಕೆ ಕಾರ್ಯಪಾಲಕ ಅಭಿಯಂತರರೊಂದಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು. ಆಟೋ ಕಾಂಪ್ಲೆಕ್ಸ್ ನಲ್ಲಿ ಸ್ಥಳ ಗುರುತಿಸಿ ನೀಡಿದಲ್ಲಿ ಸುಲಭ ಶೌಚಾಲಯದ ವತಿಯಿಂದ ಶೌಚಾಲಯ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಸಾಗರ ರಸ್ತೆ ಕೆಎಸ್‍ಎಸ್‍ಐಡಿಸಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ ಸಾಗರ ರಸ್ತೆ ಕೈಗಾರಿಕಾ ವಸಾಹತು ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಮಧ್ಯ ರಸ್ತೆಯಲ್ಲಿ ಒಂದು ವಾಹನ ಹೋಗುವುದು ಕಷ್ಟವಾಗಿದ್ದು ಇದನ್ನು ಸರಿಪಡಿಸಬೇಕೆಂದು ಕೋರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸೆಲ್ವಮಣಿ, ಈ ಕುರಿತು ತಾವು ಭೇಟಿ ನೀಡಿ, ಎಸ್‍ಪಿಯವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಈಗಾಗಲೇ ಅನುಮೋದನೆ ಪಡೆದು ಹೆಚ್ಚುವರಿ ಮತ್ತು ಬದಲಿ ಉತ್ಪನ್ನ ತಯಾರಿಕೆಗಾಗಿ ಪ್ರಸ್ತಾವನೆ ಸಲ್ಲಿಸಿದ ಕೈಗಾರಿಕೆಗಳಿಗೆ ಮಾಲಿನ್ಯ ಮಂಡಳಿ ಎನ್‍ಓಸಿ ಪಡೆದು ಬದಲಾಯಿಸಲು ಅನುಮೋದನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣ್, ಡಿಐಸಿ ಜಂಟಿ ನಿರ್ದೇಶಕ ಗಣೇಶ್, ಮಹಾನಗರಪಾಲಿಕೆ ಕಾ.ಅಭಿಯಂತರ ನಟೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರು, ಇತರೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಜರಿದ್ದರು.

UPSC Result | ಎರಡನೇ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಶಿವಮೊಗ್ಗದ ಮೇಘನಾ ಪಾಸ್, ಸಾಧನೆಯ ಗುಟ್ಟೇನು?

error: Content is protected !!