
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾವತಿಯ ವಿಐಎಸ್.ಎಲ್.ನಲ್ಲಿ ನವೆಂಬರ್ 4 ಮತ್ತು 5ರಂದು ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಜಿ ನೌಕರ ಹಾಗೂ ಕನ್ನಡ ಚಿತ್ರನಟ ಎಸ್.ದೊಡ್ಡಣ್ಣ (Actor S.Doddanna) ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನ.4ರಂದು ಯುದುವೀರ ಒಡೆಯರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅತಿಥಿಗಳಾಗಿ ಆಗಮಿಸಲಿದ್ದಾರೆ. ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಪ್ರಯತ್ನ ನಡೆದಿದೆ ಎಂದರು.
ನ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇತರರು ಭಾಗವಹಿಸಲಿದ್ದಾರೆ.
1968 ರಿಂದ 88ರವರೆಗೆ ಎಲ್ಲ ಹಂತದ ವಿಭಾಗಗಳ ಮೂಲಕ ಕಾರ್ಖಾನೆಯ ಉದ್ಯೋಗಿಯಾದೆ. ಈ ಕಾರ್ಖಾನೆ ನನ್ನ ಪಾಲಿಗೆ ತಾಯಿಯಷ್ಟೆ ಪೂಜ್ಯನೀಯ. ಇದರೆಡೆಗೆ ವಿಶೇಷ ಪ್ರೀತಿ ಇದೆ. ಕಾರ್ಖಾನೆ ಪುನರಾರಂಭವಾಗಬೇಕು. ಇದರ ಪ್ರಯೋಜನ ಜನರಿಗೆ ಲಭಿಸಬೇಕು. ಅದಕ್ಕಾಗಿ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ವಿವಿಧ ಹಂತದ ಪ್ರಯತ್ನ ಸಹ ನಡೆಯುತ್ತಿದೆ.
– ಎಸ್.ದೊಡ್ಡಣ್ಣ, ವಿಐಎಸ್.ಎಲ್ ಮಾಜಿ ಉದ್ಯೋಗಿ, ಚಿತ್ರ ನಟ
ಕಾರ್ಯಕ್ರಮದಲ್ಲಿ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತ ವಿವಿಧ ರೀತಿಯಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ಜಯದೇವ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್, ಇನ್ಫೋಸಿಸ್ ಸುಧಾಮೂರ್ತಿ, ವಿಆರ್.ಎಲ್.ನ ವಿಜಯ ಸಂಕೇಶ್ವರ, ಬೆಳಗಾವಿಯಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಪ್ರಭಾಕರ್ ಕೋರೆ ಅವರನ್ನು ಸನ್ಮಾನಿಸಲಾಗುವುದು. ಜೊತೆಗೆ, ಸುತ್ತೂರು ಮಠದ ಸ್ವಾಮೀಜಿ, ಆದಿಚುಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಕೋಡಿಮಠದ ಶಿವಾನಂದ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಸುದೀರ್ಘ ಇತಿಹಾಸ ಸಾರುವ ಕಾರ್ಖಾನೆ
ಭದ್ರಾವತಿಯಲ್ಲಿ ಈ ಹಿಂದೆ ವೈಭವವನ್ನು ಸಾರಿದ್ದು ವಿಐಎಸ್.ಎಲ್. ಈ ಕಾರ್ಖಾನೆಯು ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ. ಭದ್ರಾವತಿ ಬೆಳವಣಿಗೆಗೆ ಪೂರಕವಾಗಿದೆ. 1918ರಲ್ಲಿ ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಶಂಕಸ್ಥಾಪನೆ ಮಾಡಿದ್ದರು. ಒಡೆಯರ್ ಹಾಗೂ ಸರ್. ಎಂ.ವಿಶ್ವೇಶ್ವರಯ್ಯ ಅವರಿಂದಾಗಿ 1923ರಲ್ಲಿ ಆರಂಭಗೊಂಡಿತ್ತು ಎಂದು ದೊಡ್ಡಣ್ಣ ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ವಿ.ರೇವಣ್ಣಸಿದ್ದಯ್ಯ, ಬಿ.ಎಸ್. ವೇದವ್ಯಾಸ್, ಕನ್ನಡವೇ ಸತ್ಯ ರಂಗಣ್ಣ, ನರಸಿಂಹಚಾರ್ ಉಪಸ್ಥಿತರಿದ್ದರು.