Section 144 | ರಾಗಿಗುಡ್ಡಕ್ಕೆ ಸೀಮಿತವಾಗಿದ್ದ ನಿಷೇಧಾಜ್ಞೆ ಶಿವಮೊಗ್ಗ ನಗರದಾದ್ಯಂತ ವಿಸ್ತರಣೆ, ಏನೆಲ್ಲ‌‌ ಕಂಡಿಷನ್ ಅನ್ವಯ?

Section 144

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರಾಗಿಗುಡ್ಡದಲ್ಲಿ (Ragigudda stone pelting case) ಭಾನುವಾರ ಸಂಭವಿಸಿದ ಕಲ್ಲು ತೂರಾಟದ ಬೆನ್ನಲ್ಲೇ ಈ ಪ್ರದೇಶಕ್ಕೆ ಮಾತ್ರ ಅನ್ವಯವಾಗುವಂತೆ ಸೆಕ್ಷನ್ 144 (ನಿಷೇಧಾಜ್ಞೆ) ಹೇರಲಾಗಿತ್ತು. ಅದನ್ನು ಇಡೀ ನಗರಕ್ಕೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ‌ ಆದೇಶಿಸಿದ್ದಾರೆ.
ಭಾರತೀಯ ದಂಡ ಪ್ರಕ್ರಿಯೆ ಸಂಹಿತ 1973ರ ಕಲಂ 144‌ ಅನ್ವಯ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಪ್ರತಿಬಂಧಕಾಜ್ಞೆಯನ್ನು ವಿಧಿಸಲಾಗಿದೆ.

READ | ರಾಗಿಗುಡ್ಡದಲ್ಲಿ ಪೊಲೀಸ್ ಸರ್ಪಗಾವಲು, ಇದುವರೆಗೆ ಏನೇನಾಯ್ತು?

ನಿಷೇಧಾಜ್ಞೆ ವಿಸ್ತರಣೆ ಕಾರಣವೇನು?
ಕಿಡಿಗೇಡಿಗಳು ಶಿವಮೊಗ್ಗ ನಗರದ ಇತರ ಪ್ರದೇಶಗಳಲ್ಲಿಯು ಸಹ ಗಲಭೆಯನ್ನು ಉಂಟುಮಾಡುವ ಸಂಭವ ಇರುವುದರಿಂದ ಮುಂಜಾಗೃತ ಕ್ರಮವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಿ.ಆರ್.ಪಿ.ಸಿ ಕಲಂ 144 ರನ್ವಯ ಪ್ರತಿಬಂಧಕಾಜ್ಞೆ ಹೊರಡಿಸಲು ಎಸ್.ಪಿ‌ ಅವರು ಕೋರಿರುತ್ತಾರೆ. ಅದರನ್ವಯ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಅಕ್ಟೋಬರ್ 1ರ ರಾತ್ರಿ 12 ಗಂಟೆಯಿಂದ ಮುಂದಿನ ಆದೇಶದವರೆಗೆ ಪ್ರತಿಬಂಧಕಾಜ್ಞೆಯನ್ನು ವಿಧಿಸಲಾಗಿದೆ.
ಏನೆಲ್ಲ ನಿಬಂಧನಗಳು?

  • ನಿಷೇಧಿತ ಅವಧಿಯಲ್ಲಿ ಐದು ಜನರಿಗಿಂತ ಹೆಚ್ಚು ಜನರು ಗುಂಪುಗೂಡುವುದನ್ನು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ.
  • ನಿಷೇಧಾಜ್ಞೆಯ ಅವಧಿಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಹಾಗೂ ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ.
  • ಯಾವುದೇ ರೀತಿಯ ಘೋಷಣೆಗಳನ್ನು ಕೂಗುವುದು, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದನ್ನು ಹಾಗೂ ಪ್ರಚೋದನಾಕಾರಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಕಟ್ಟುವುದನ್ನು ನಿಷೇಧಿಸಲಾಗಿದೆ.
  • ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು ಮತ್ತು ಉಪಯೋಗಿಸುವುದನ್ನು ಹಾಗೂ ಯಾವುದೇ ಸ್ಫೋಟಕ ವಸ್ತುಗಳನ್ನು ಹೊಂದುವುದನ್ನು ಮತ್ತು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
  • ಈ ಹಿಂದೆಯೇ ಪೂರ್ವಾನುಮತಿಯನ್ನು ಪಡೆದು ನಿಗದಿಯಾದಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಸಿದೆ

error: Content is protected !!